ರಾಣೆಬೆನ್ನೂರು: ಬಿಜೆಪಿ ಸದ್ಯ ದೇಶದಲ್ಲಿ ಇವಿಎಂ ಫ್ರಾಡ್ ಮೂಲಕ ಗೆಲವು ಸಾಧಿಸುತ್ತಿದೆ ಎಂದು ಮಾಜಿ ವಿಧಾನಸಭಾ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ರಾಣೆಬೆನ್ನೂರು ನಗರದ ಆದಿಶಕ್ತಿ ಸಭಾಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಸೋಲಿನ ಆತ್ಮವಾಲೋಕನ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಚುನಾವಣೆಯಲ್ಲಿ ಸಹ ಬಿಜೆಪಿ ಪಕ್ಷ 25 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದರು. ಅಲ್ಲದೇ ಡಿ.5 ರಂದು ನಡೆದ ಉಪಚುನಾವಣೆಯಲ್ಲಿ ಸಹ 12 ಸ್ಥಾನ ಗೆಲ್ಲುತ್ತದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆಂದರೆ ಇವಿಎಂ ಮಷಿನ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರ್ಥ. ರಾಣೆಬೆನ್ನೂರು ಕ್ಷೇತ್ರದಲ್ಲಿ ಸಿಎಂ, ಗೃಹಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸ್ ವಾಹನ, ಆಂಬುಲೆನ್ಸ್ ಒಳಗೆ ಹಣ ಸಾಗಿಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿ ಹಿಂದೆ ಓಡಿ ಹೋದ ಅನರ್ಹರು ಹಣ ಬಲದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಅವರು ಮುಂದಿನ ಚುನಾವಣೆಯಲ್ಲಿ ಯಾವ ಆಧಾರದ ಮೇಲೆ ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದುನೋಡಬೇಕು. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು ಎಂದರು.