ಹಾವೇರಿ: ತಮ್ಮ ರಾಜೀನಾಮೆಗೆ ಕಾರಣ ಏನು ಎಂಬುದುನ್ನ ಈಗಾಗಲೇ ಆನಂದ್ ಸಿಂಗ್ ಹೇಳಿದ್ದಾರೆ. ಅವರು ರಾಜೀನಾಮೆ ನೀಡಲು ಜಿಂದಾಲ್ಗೆ ಭೂಮಿ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಸರ್ಕಾರದ ಬಗ್ಗೆ ಇದ್ದ ಅಸಮಾಧಾನ ಕಾರಣ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ಮಾತನಾಡಿದ ಅವರು, ಸರ್ಕಾರ ನಿಷ್ಕ್ರಿಯ ಮತ್ತು ಗೊಂದಲದ ಗೂಡಾಗಿದೆ. ತದ್ವಿರುದ್ಧ ಸಿದ್ಧಾಂತವಿರುವ ಎರಡು ಪಕ್ಷಗಳ ನಾಯಕರು ತಮ್ಮ ಅಧಿಕಾರದ ಆಸೆಗಾಗಿ ಸರ್ಕಾರ ರಚಿಸಿದ್ದಾರೆ. ಇದು ಈ ಪಕ್ಷದ ಶಾಸಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಹೀಗಾಗಿ ಈ ರೀತಿಯ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇಂತಹ ಸರ್ಕಾರದಿಂದ ತಾವು ಚುನಾವಣೆಗೆ ಹೋದರೆ ಪುನರಾಯ್ಕೆಯಾಗುವುದಿಲ್ಲ ಎಂಬುದು ಶಾಸಕರಿಗೆ ಮನವರಿಕೆಯಾಗಿದೆ. ಆನಂದ್ ಸಿಂಗ್ ರಾಜೀನಾಮೆ ಬಿಜೆಪಿಗೆ ಪ್ಲಸ್ಸೂ ಅಲ್ಲಾ ಮೈನಸ್ಸು ಅಲ್ಲ. ಈ ಕುರಿತಂತೆ ಯಾವುದೇ ಅಸಮಾಧಾನಿತ ಶಾಸಕರು ತಮ್ಮ ಸಂಪರ್ಕದಲ್ಲಿಲ್ಲ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಎಂ.ಉದಾಸಿ, ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೊಬ್ಬರ ಮೇಲೆ ವಿಶ್ವಾಸ ಕಾಣದಂತೆ ಪರಿಸ್ಥಿತಿ ಇರುವದರಿಂದ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಎಂದೂ ರಾಜೀನಾಮೆ ನೀಡಲಿ ಅಂತಾ ಆಪೇಕ್ಷೆ ಪಟ್ಟಿಲ್ಲ. ಅವರ ರಾಜೀನಾಮೆ ಅಂಗೀಕಾರವಾಗುವವರೆಗೆ ತಾವು ಮಾತನಾಡುವುದು ಅನಪೇಕ್ಷಿತ ಎಂದರು. ಈ ಕುರಿತಂತೆ ತಮ್ಮ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದರ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಉದಾಸಿ ಹೇಳಿದರು.