ರಾಣೆಬೆನ್ನೂರು : ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣದ ಬಳಿ ಇರುವ ತುಂಗಭದ್ರಾ ನದಿಯ ಸೇತುವೆ ಮೇಲೆ ನಡೆದಿದೆ.
ರಾಣೆಬೆನ್ನೂರು ತಾಲೂಕಿನ ವಡೇರಾಯನಹಳ್ಳಿ ಗ್ರಾಮದ ಹಾಲಪ್ಪ ಸಿದ್ದಪ್ಪ ಉಜ್ಜನಗೌಡ್ರ(51) ಮತ್ತು ಪತ್ನಿ ಸಿದ್ದಮ್ಮ ಹಾಲಪ್ಪ ಉಜ್ಜನಗೌಡ್ರ ಎಂಬುವರು ಮೃತ ದಂಪತಿ. ಮೃತರು ಹರಿಹರ ನಗರದಿಂದ ರಾಣೆಬೆನ್ನೂರಿನ ಸ್ವಂತ ಗ್ರಾಮವಾದ ವಡೇರಾಯನಹಳ್ಳಿ ಗ್ರಾಮಕ್ಕೆ ಬೈಕ್ ಮೇಲೆ ಬರುತ್ತಿದ್ದರು.
ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ಬಂದಾಗ ಲಾರಿ ಎದುರಿಗೆ ಬಂದಿದ್ದು, ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ಪತ್ನಿ ಸೇತುವೆ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಅತ್ತ ಪತಿ ಸ್ಥಳದಲ್ಲೇ ಮೃತರಾಗಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.