ಹಾವೇರಿ: ಬೆಳಿಗ್ಗೆಯಿಂದ ಸಂಜೆಯವರೆಗೆ ಮಾಧ್ಯಮಗಳಲ್ಲಿ ಕಾಣಬೇಕು ಎಂದು ಸಿದ್ದರಾಮಯ್ಯ ಏನಾದರೊಂದು ಹೇಳಿಕೊಂಡು ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ನಿಂದಾಗಿ ಯಾವುದೇ ಕಾರ್ಯಕ್ರಮಗಳನ್ನು ಸರ್ಕಾರ ರದ್ದು ಮಾಡಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಇಲ್ಲಿನ ನೆಗಳೂರು ಗ್ರಾಮದಲ್ಲಿ, ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೋವಿಡ್ ಅಡ್ಡಿಯಾಗುವುದಿಲ್ವಾ? ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ಸಂಬಂಧ ಸರ್ಕಾರ ಈಗ ಯಾವ ಕಾರ್ಯಕ್ರಮವನ್ನೂ ಬ್ಯಾನ್ ಮಾಡಿಲ್ಲ. ಕಾಂಗ್ರೆಸ್ ಪಾದಯಾತ್ರೆ ಮಾಡುವಾಗ ಕೊರೊನಾ ಅತಿಹೆಚ್ಚಾಗಿತ್ತು. ಹಾಗಾಗಿ, ಪಾದಯಾತ್ರೆ ನಿಷೇಧಿಸಲಾಗಿತ್ತು ಎಂದರು.
ಪ್ರಧಾನಿ ಕಾರ್ಯಕ್ರಮಕ್ಕಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಅವರು ಸಂಚರಿಸುವ ಮಾರ್ಗಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಕ್ರಮ ತೆಗೆದುಕೊಳ್ಳಲಾಗಿದೆ. ದೇಶದ ಪ್ರಧಾನಿ ರಾಜ್ಯಕ್ಕೆ ಬರುತ್ತಾರೆ ಎಂದರೆ ಅದಕ್ಕೇನು ಮುಂಜಾಗೃತಾ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಲೇಪಾಕ್ಷಿ ಕದರಿ ಹೊಸ ತಳಿ ಪರಿಚಯ: ರಾಜ್ಯದ ರೈತರು ಆಂಧ್ರಪ್ರದೇಶಕ್ಕೆ ಹೋಗಿ ಶೇಂಗಾ ಬಿತ್ತನೆ ಬೀಜ ಖರೀದಿಸುತ್ತಿರುವ ಬಗ್ಗೆ ಮಾತನಾಡುತ್ತಾ, ಅಧಿಕೃತ ಶೇಂಗಾ ಬಿತ್ತನೆ ಬೀಜಗಳನ್ನೇ ಖರೀದಿಸಬೇಕು. ಅದರ ಬದಲು ದುಡ್ಡು ಕಡಿಮೆಯಾಗುತ್ತದೆ ಎಂದು ಅನಧಿಕೃತ ಬಿತ್ತನೆ ಬೀಜಗಳನ್ನು ಖರೀದಿಸಬಾರದು. ಸರ್ಕಾರದಿಂದ ಬೀಜ ಮಾರಾಟ ಮಾಡಲಾಗುತ್ತದೆ. ಹೊಸದಾಗಿ ಲೇಪಾಕ್ಷಿ ಕದರಿ ಎನ್ನುವ ಶೇಂಗಾ ಬಿತ್ತನೆ ಬೀಜ ಪರಿಚಯಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಕೃಷಿ ಸಿಂಚಾಯಿ ಯೋಜನೆಗೆ ಹಾವೇರಿ ಜಿಲ್ಲೆಯ ಏಳು ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಈ ಯೋಜನೆಗೆ 69 ಕೋಟಿ 50 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ ಮುನ್ಸೂಚನೆ