ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಾವೇರಿ, ರಾಣೆಬೆನ್ನೂರು ಹಾಗೂ ಹಿರೇಕೆರೂರಿಗೆ ಆಗಮಿಸಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯ ನೆರವೇರಿಸಲಿದ್ದಾರೆ.
ಬೆಳಗ್ಗೆ 11.40ಕ್ಕೆ ಹೆಲಿಕಾಪ್ಟರ್ ಮೂಲಕ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬಸರೀಹಳ್ಳಿಯ ಹೆಲಿಪ್ಯಾಡ್ಗೆ ಆಗಮಿಸಲಿರುವ ಸಿಎಂ ಬೊಮ್ಮಾಯಿ, 12 ಗಂಟೆಗೆ ಹಿರೇಕೆರೂರು ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ದುರ್ಗಾದೇವಿ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗೆ ಹಾಗೂ ದುರ್ಗಾದೇವಿ ಕೆರೆಗೆ ಬಾಗಿನ ಅರ್ಪಣೆ ಸೇರಿದಂತೆ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
ಹಿರೇಕೆರೂರು ಕಾರ್ಯಕ್ರಮದ ನಂತರ ರಾಣೆಬೆನ್ನೂರಿಗೆ ಆಗಮಿಸಿ, ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿ ನಂತರ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 3.35ಕ್ಕೆ ಹಾವೇರಿ ನಗರದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ.
ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ನಿರ್ಮಿಸಲಾದ ಹಿರಿಯ ನಾಗರಿಕರ ಆರೈಕೆ ಕೇಂದ್ರ ಉದ್ಘಾಟನೆ ಮಾಡಿ, ಆನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಕಟ್ಟಡದ ಶಂಕುಸ್ಥಾಪನೆ ಸೇರಿದಂತೆ ಹಾವೇರಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಸಂಜೆ 5 ಗಂಟೆಗೆ ಹಾವೇರಿ ತಾಲೂಕಿನ ಜಂಗಮನಕೊಪ್ಪ ಗ್ರಾಮದ ಬಳಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಘಟಕದ ಶಂಕುಸ್ಥಾಪನೆ ನೆರವೇರಿಸಿ, ಸಂಜೆ ಆರು ಗಂಟೆಗೆ ಹಾವೇರಿಯಿಂದ ರಸ್ತೆ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣದತ್ತ ತೆರಳಲಿದ್ದಾರೆ.
ಸಿಎಂ ಭಾಗಿಯಾಗಲಿರುವ ಕಾರ್ಯಕ್ರಮಗಳಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ, ತೋಟಗಾರಿಕೆ ಸಚಿವ ಮುನಿರತ್ನ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.