ಹಾವೇರಿ: ನಾನು ಸಭಾಪತಿಯಾಗಿರುವದು ಶಿಕ್ಷಕರಿಗಷ್ಟೇ ಅಲ್ಲ, ಉತ್ತರ ಕರ್ನಾಟಕದ ಎಲ್ಲರಿಗೂ ಅಭಿಮಾನ ಹಾಗೂ ಹೆಮ್ಮೆಯಾಗಿದೆ ಎಂದು ನೂತನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಹುಕ್ಕೇರಿಮಠದಲ್ಲಿ ಸದಾಶಿವ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದ ಅವರು, ನನ್ನ ರಾಜಕೀಯ ಇತಿಹಾಸದ 40 ವರ್ಷಗಳಲ್ಲಿ 11 ಸಭಾಪತಿಗಳನ್ನು ನಾನು ನೋಡಿದ್ದೇನೆ. ಆದರೆ ಸಭಾಪತಿಗಳಿಗೆ ಈ ರೀತಿಯ ಜನರು ಬಂದಿದ್ದನ್ನ ನಾನು ನೋಡಿಲ್ಲಾ. ಈ ರೀತಿಯ ಪ್ರೀತಿ ವಿಶ್ವಾಸ ನಾನು ಗಳಿಸಿದ್ದೇನೆ ಮತ್ತು ಅದನ್ನು ಉಳಿಸಿಕೊಂಡು ಹೋಗುತ್ತೇನೆ. ಬಹಳ ಜವಾಬ್ದಾರಿಯುತವಾಗಿ ಸಭಾಪತಿ ಸ್ಥಾನವನ್ನು ಮಾಜಿ ಪ್ರದಾನಿ ದೇವೇಗೌಡ,ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ ನನಗೆ ನೀಡಿದ್ದಾರೆ.
ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಸಭಾಪತಿಯಾಗಿದ್ದೇನೆ. ರಾಜ್ಯದ ಇತಿಹಾಸದಲ್ಲಿ ಬಸವರಾಜ್ ಹೊರಟ್ಟಿ ಈ ಕಾಲದಲ್ಲಿ ಸಭಾಪತಿಯಾಗಿದ್ದರು ಎನ್ನುವಂತೆ ಕೆಲಸ ಮಾಡುವ ಚಾಲೆಂಜ್ ತಗೆದುಕೊಂಡಿದ್ದೇನೆ. ಮೂರು ಸಾವಿರಮಠದ ಆಸ್ತಿ ಕುರಿತಂತೆ ದಿಂಗಾಲೇಶ್ವರ ಶ್ರೀಗಳು ಪಾದಯಾತ್ರೆ ಮಾಡಿ ಹೋರಾಟ ಮಾಡಲಿ. ನಮ್ಮ ತಪ್ಪುಗಳನ್ನು ತೋರಿಸಿದರೆ ಅದನ್ನು ತಿದ್ದಿಕೊಳ್ಳುತ್ತೇವೆ. ಹಿಂದಿನ ಶ್ರೀಗಳು ಹೆಸರು ಉಳಿಸಿಕೊಳ್ಳಲು ಕೆಎಲ್‌ಇಗೆ ಜಾಗ ನೀಡಿರುವುದು ನಿಜ. ಇದನ್ನು 2007ರಲ್ಲಿ ಅಂದಿನ ರಾಜಕೀಯ ಮುಖಂಡರು ಸೇರಿ ತೀರ್ಮಾನ ಮಾಡಿದ್ದೇವೆ. ಈ ಕುರಿತಂತೆ ನನಗೆ ಸ್ಪಷ್ಟತೆ ಇರುವುದರಿಂದ ನಾಟಕ, ರಾಜಕೀಯ ಮಾಡುವ ಅಗತ್ಯ ಇಲ್ಲ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.