ಹಾವೇರಿ: ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ಕುರಿತಂತೆ ವಾರದೊಳಗೆ ಕಾನೂನು ತಜ್ಞರ ಸಭೆ ಕರೆಯುತ್ತೇನೆ. ನಂತರ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದ ಸಿಎಂ ಸಿದ್ದರಾಮಯ್ಯ ಇದುವರೆಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ನಾವು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಮಾಡಿದ್ದೆವು. ಆದರೆ ನಮ್ಮ ಸಮಾಜದ ಶಾಸಕರು ಮತ್ತು ಸಚಿವರು ಮುತ್ತಿಗೆ ಬೇಡ, ಸಿಎಂ ಮಾತುಕತೆಗೆ ಕರೆದಿದ್ದಾರೆ. ನಮಗೆ ಆರಂಭಿಕ ಜಯ ಸಿಕ್ಕಿದೆ ಎಂದು ತಿಳಿಸಿದ್ದರಿಂದ ಮುತ್ತಿಗೆ ವಾಪಸ್ ಪಡೆದಿದ್ದೆ. ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೆ ಎಂದು ಪಂಚಮಸಾಲಿ ಶ್ರೀಗಳು ತಿಳಿಸಿದರು.
ಮುಂದುವರೆದು, ಸಿಎಂ ಸಿದ್ದರಾಮಯ್ಯ ವಾರದೊಳಗೆ ಬೇಡ ಜನವರಿ 20ರ ವರೆಗೆ ಸರ್ಕಾರದ ನಿಲುವು ಸ್ಪಷ್ಟಪಡಿಸುವಂತೆ ತಿಳಿಸಿದ್ದೆ. ಆದರೆ ಸಿಎಂ ಸಿದ್ದರಾಮಯ್ಯ ಚಳಿಗಾಲದ ಅಧಿವೇಶನ ನಡೆದ ನಂತರ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ಕುರಿತಂತೆ ಕಾನೂನುತಜ್ಞರ ಸಭೆ ಕರೆಯಲಿಲ್ಲಾ. ಈ ಹಿನ್ನೆಲೆಯಲ್ಲಿ ಮತ್ತೆ ಹೋರಾಟ ಆರಂಭಿಸಿರುವುದಾಗಿ ಶ್ರೀಗಳು ಹೇಳಿದರು. ಇದೇ 12 ರಂದು ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಹೋರಾಟದ ಅಂಗವಾಗಿ ಇಷ್ಟಲಿಂಗ ಪೂಜೆ ಮಾಡಲಾಗುವುದು. ಈ ಹೋರಾಟದ ಮೂಲಕ ಸರ್ಕಾರಕ್ಕೆ ನಾನು ತಿಳಿಸುವುದೇನಂದರೆ ಕೊನೆಯ ಪಕ್ಷ 12ರೊಳಗೆ ನೀವು ಕಾನೂನುತಜ್ಞರ ಜೊತೆ ಚರ್ಚಿಸಿದರೆ ನಮ್ಮ ಹೋರಾಟಗಾರರಿಗೆ ಸ್ವಲ್ಪಮಟ್ಟಿಗೆ ಭರವಸೆ ಸಿಕ್ಕಂತಾಗುತ್ತದೆ. ಸಂಕ್ರಾಂತಿಯೊಳಗೆ ಸಿಎಂ ಸಿದ್ದರಾಮಯ್ಯ ಕಾನೂನು ತಜ್ಞರ ಸಭೆಯಾದರು ನಡೆಸಲಿ ಎಂದು ಒತ್ತಾಯಿಸಿದರು.
ಕಳೆದ ಮೂರು ವರ್ಷಗಳಿಂದ ಕೂಡಲ ಪಂಚಮಸಾಲಿಪೀಠ 2ಎ ಮೀಸಲಾತಿಗೆ ನಿರಂತರ ಹೋರಾಟ ಮಾಡುತ್ತಿದೆ. ಈ ದೇಶದಲ್ಲಿ ಯಾವ ಸಮಾಜವು ಮಾಡದಂತ ಸಾಮಾಜಿಕ ನ್ಯಾಯವನ್ನು ಪಂಚಮಸಾಲಿಪೀಠ ಮಾಡುತ್ತಿದೆ. 12 ರಂದು ಮಾಡುವ ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಪಂಚಮಸಾಲಿಗಳ ನಡಿಗೆ ಮೋಟೆಬೆನ್ನೂರು ಕಡೆಗೆ ಎಂಬ ಶಿರ್ಷೀಕೆ ನೀಡಿರುವುದಾಗಿ ಶ್ರೀಗಳು ಹೇಳಿದರು.
ಪ್ರತಿಭಟನೆಯಲ್ಲಿ ವಿಜಯಾನಂದ ಕಾಶಪ್ಪನವರ್, ಬಸನಗೌಡ ಪಾಟೀಲ ಯತ್ನಾಳ, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ವಿನಯ ಕುಲಕರ್ಣಿ ಮತ್ತು ಅರವಿಂದ ಬೆಲ್ಲದ ಸೇರಿದಂತೆ ವಿವಿಧ ನಾಯಕರು ಪಾಲ್ಗೊಳ್ಳಲಿದ್ದಾರೆ. ಮೋಟೆಬೆನ್ನೂರು ಗ್ರಾಮದ ಸ್ವಾತಂತ್ರ ಹೋರಾಟಗಾರ ಮೈಲಾರ ಮಹದೇವಪ್ಪ ಹುಟ್ಟಿದ ಗ್ರಾಮ. ಈ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48 ಹಾಯ್ದುಹೋಗಿದೆ. ಈ ಹಿನ್ನೆಲೆಯಲ್ಲಿ ಇದೇ 12 ರಂದು ಮೋಟೆಬೆನ್ನೂರುಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಅಂದು ರಸ್ತೆ ತಡೆ ನಡೆಸಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿರುವುದಾಗಿ ಶ್ರೀಗಳು ತಿಳಿಸಿದರು.
ಇದನ್ನೂ ಓದಿ: ಬಿಡುಗಡೆ ಆದ ಮರುಕ್ಷಣದಲ್ಲೇ ಕರವೇ ನಾರಾಯಣ ಗೌಡ ಮತ್ತೆ ಬಂಧನ