ಹಾವೇರಿ: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ರಾಮಾಯಣ ಮಹಾಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿದ್ದನ್ನು ಸ್ವಾಗತಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಜಿಲ್ಲೆ ರಾಣೆಬೆನ್ನೂರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಯೋಧ್ಯೆ ವಿಮಾನ ನಿಲ್ದಾಣಕ್ಕೆ ಹೆಸರಿಟ್ಟಿದ್ದು ಸಂತಸ, ನಾವು ಸ್ವಾಗತ ಮಾಡುತ್ತೇವೆ. ಈ ಬಗ್ಗೆ ಈ ಹಿಂದೆ ನಾವು ಒತ್ತಾಯ ಮಾಡಿದ್ದೆವು ಎಂದರು.
ವಾಲ್ಮೀಕಿ ಮಂದಿರ: ಆಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರಕ್ಕಾಗಿ ನಾವು ಡಿಮ್ಯಾಂಡ್ ಮಾಡಿದ್ದೇವೆ. ರಾಮನ ಪರಿಚಯ ಮಾಡಿಸಿದವರು ವಾಲ್ಮೀಕಿ. ಈಗ ಒಂದು ಹಂತಕ್ಕೆ ಬಂದಿದ್ದು, ವಾಲ್ಮೀಕಿ ಮಂದಿರವೂ ಆಗಬೇಕು. ಈ ಕುರಿತಂತೆ ಸಭೆಯಲ್ಲಿ ಕೂಡಾ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಅಯೋಧ್ಯೆಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಮಂದಿರ ಆಗಿದೆ, ಬಹಳ ಜನರ ನಿರೀಕ್ಷೆ ಇತ್ತು. ಒಳ್ಳೆಯ ರೀತಿಯಲ್ಲಿ ತಯಾರಾಗಿದೆ. ಪ್ರತಿಷ್ಠಿತ ಮಂದಿರ ಆಗಿದೆ, ಬಹಳಷ್ಟು ಮಂದಿರದಲ್ಲಿ ಇದು ಒಂದಾಗಿದೆ. ಮಾಡರ್ನ್ ಅರ್ಕಿಟೆಕ್ನಿಂದ ಕೂಡಿದೆ ಎಂದು ಜಾರಕಿಹೊಳಿ ಹೇಳಿದರು.
ಚುನಾವಣೆಯಲ್ಲಿ ಅಭಿವೃದ್ಧಿಗಿಂತ ಧಾರ್ಮಿಕ ವಿಚಾರ ಹೈಲೈಟ್: ಚುನಾವಣೆ ವೇಳೆ ಅಭಿವೃದ್ಧಿಗಿಂತ ಧಾರ್ಮಿಕ ವಿಚಾರ ಹೈಲೈಟ್ ಆಗುತ್ತಿರುವ ಕುರಿತಂತೆ ಮಾತನಾಡಿದ ಅವರು, ರಾಜಕೀಯ ಬಿಟ್ಟು ಏನೆಲ್ಲಾ ರಾಜಕೀಯ ಇದ್ದೇ ಇರುತ್ತೆ. ಚುನಾವಣೆ ಆದ ಬಳಿಕ ಎಲ್ಲವೂ ಗೊತ್ತಾಗುತ್ತದೆ. ರಾಜಕೀಯಕ್ಕೂ ಆದಕ್ಕೂ ಸಂಬಂಧ ಇದ್ದೇ ಇರುತ್ತೆ. ನಮ್ಮ ದೇಶ ಹಾಗೇ ಬಂದಿದೆ. ಇಲ್ಲಿ ಎರಡು ವಿಚಾರಗಳು ನಡೆಯುತ್ತವೆ. ಅದಕ್ಕೆ ತಕ್ಷಣ ಕಡಿವಾಣ ಹಾಕೋಕೆ ಆಗೊಲ್ಲ. ಅದಕ್ಕೆ ಇನ್ನೂ ಸಮಯ ಬೇಕು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.
ಹಿಜಾಬ್ ಆದೇಶ ವಿಚಾರ: ಹಿಜಾಬ್ ಆದೇಶ ಸಂಬಂಧಿಸಿದಂತೆ ಪ್ರತಿಕ್ರಿಯೆಸಿದ ಅವರು, ಹಿಂದಿನ ಸರ್ಕಾರ ಆದೇಶ ಮಾಡಿಲ್ಲ, ಆದೇಶ ಸಹ ಆಗಿಲ್ಲಾ, ಮಾಡ್ತೇವಿ ಎಂದು ಮಾಡಿಲ್ಲಾ. ಹಿಜಾಬ್ ಧರಿಸುವ ಕುರಿತಂತೆ ಮೇಲಾಗಿ ಕಾನೂನು ಇಲ್ಲ. ಧರಿಸೋದು ಬಿಡೋದು ಅವರ ಇಷ್ಟ, ಜಾತಿಗೆ ಹಾಗೂ ಕೋಮಿಗೆ ಬಿಟ್ಟ ವಿಚಾರ ನಡೆದುಕೊಂಡು ಬಂದಿದೆ, ನಡೆದುಕೊಂಡು ಹೋಗಬೇಕಷ್ಟೇ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇನ್ನಿಬ್ಬರು ಡಿಸಿಎಂ ಆಯ್ಕೆ ವಿಚಾರ ಕುರಿತು ಮಾತನಾಡಿ, ಸದ್ಯ ಯಾವುದು ಇಲ್ಲ. ಇಬ್ಬರು ಡಿಸಿಎಂ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಕಲ್ಲಡ್ಕರ್ ಪ್ರಭಾಕರ್ ಭಟ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲು ಆಗಿದೆ. ಕೋರ್ಟ್ ಅದನ್ನು ನಿರ್ಣಯ ಮಾಡುತ್ತದೆ. ಯಾವ ಸಮಯದಲ್ಲಿ ಏನೂ ಹೇಳಿದ್ದಾರೆ ಅನ್ನುವುದನ್ನು ಕೋರ್ಟ್ ವಿಚಾರಣೆ ಮಾಡುತ್ತದೆ. ಕಾದು ನೋಡಬೇಕಷ್ಟೇ ಈಗ ಮಾತನಾಡುವುದು ಅನವಶ್ಯಕ ಎಂದರು.
ಸಚಿವ ಮಧುಬಂಗಾರಪ್ಪ ಚೆಕ್ ಬೌನ್ಸ್ ವಿಚಾರ ರಾಜೀನಾಮೆ ಯಾಕೆ ಕೊಡಬೇಕು? ಖಾಸಗಿ ವಿಚಾರ ಅದು ವ್ಯವಹಾರದಲ್ಲಿ ಇದೆಲ್ಲಾ ಇರುತ್ತದೆ. ಇಂಥ ಕೇಸ್ ಗಳು ಆಗಿವೆ. ರಾಜಕೀಯವಾಗಿ ತಪ್ಪು ಮಾಡಿದರೆ ಬೇರೆ ಬ್ಯುಸಿನೆಸ್ ಮಾಡೋರಿಗೆ ಇದೆಲ್ಲಾ ಇದ್ದೇ ಇರುತ್ತದೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.
ಇದನ್ನೂಓದಿ:ಅಯೋಧ್ಯೆ ರೈಲು, ವಿಮಾನ ನಿಲ್ದಾಣ ಉದ್ಘಾಟಿಸಿ, ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ