ಹಾವೇರಿ : ಎಟಿಎಂಗೆ ಬರುವ ಅನಕ್ಷರಸ್ಥ ಅಮಾಯಕರನ್ನ ವಂಚಿಸಿ ಹಣ ದೋಚುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಾನಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಹಾನಗಲ್ ತಾಲೂಕಿನ ಬಾಳೂರು ಗ್ರಾಮದ ಕೌಸರಬಾನು (33) ಎಂದು ಗುರುತಿಸಲಾಗಿದೆ. ಎಟಿಎಂಗೆ ಬರುವ ಅನಕ್ಷರಸ್ಥ ಗ್ರಾಹಕರಿಗೆ ಹಣ ತೆಗೆದುಕೊಡುವುದಾಗಿ ಹೇಳಿ ಪಾಸವರ್ಡ್ ಪಡೆದು ಅವರ ಅಕೌಂಟಿನಲ್ಲಿ ಹಣ ನೋಡುತ್ತಿದ್ದಳು.
ಅಧಿಕ ಹಣವಿದ್ದರೆ ಸರ್ವರ್ ಡೌನ್ ಇದೆ ಎಂದು ಹೇಳಿ ತನ್ನಲ್ಲಿರುವ ಬೇರೆ ಎಟಿಎಂ ಕಾರ್ಡ್ ನೀಡುತ್ತಿದ್ದಳು. ಬಳಿಕ ಗ್ರಾಹಕರು ಹೋದ ನಂತರ ಎಟಿಎಂನಿಂದ ಹಣ ತೆಗೆಯುತ್ತಿದ್ದಳು.
ಇವಳಿಂದ ಅನ್ಯಾಯಕ್ಕೊಳಗಾದ ಹಾನಗಲ್ ತಾಲೂಕಿನ ಇಬ್ಬರು ಪೊಲೀಸ್ ಠಾಣೆಯ ಮೆಟ್ಟೆಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 8 ಎಟಿಎಂ ಕಾರ್ಡ್, 55 ಸಾವಿರ ನಗದು ವಶ ಪಡಿಸಿಕೊಳ್ಳಲಾಗಿದೆ. ಬಂಧಿತಳು ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧಡೆ ಹಲವು ಅಮಾಯಕರನ್ನು ವಂಚಿಸಿದ್ದಾಗಿ ತಿಳಿದುಬಂದಿದೆ.