ಹಾವೇರಿ: ಕೋವಿಡ್-19 ತಪಾಸಣೆಗಾಗಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕನಿಗೆ ಸಂಚಾರಿ ಠಾಣೆ ಎಎಸ್ಐ ಅವಾಚ್ಯ ಪದಗಳಿಂದ ನಿಂದಿಸಿ ದಂಡ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಹಿರಿಯ ಆರೋಗ್ಯ ಸಹಾಯಕ ಮಂಜುನಾಥ ಹೊನ್ನಾರಗರ ಎಂಬುವರು ನಿನ್ನೆ ಸಂಜೆ ನಗರದ ಆರ್ಟಿಓ ಕಚೇರಿ ಬಳಿ ಇರುವ ಕೊರೊನಾ ಚೆಕ್ ಪೋಸ್ಟ್ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆಗ್ತಿದ್ರಂತೆ. ಈ ವೇಳೆ ಸಂಚಾರಿ ಠಾಣೆ ಎಎಸ್ಐ, ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುನಾಥ್ ಅವರ ಬೈಕ್ ತಡೆದು, ಅವಾಚ್ಯ ಪದಗಳಿಂದ ನಿಂದಿಸಿ, ಧಮ್ಕಿ ಹಾಕಿದ್ದಲ್ಲದೆ 1 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ಸಾವಿರ ರೂಪಾಯಿ ಹಣ ಪಡೆದ ಎಎಸ್ಐ 500 ರುಪಾಯಿ ರಸೀದಿ ಕೊಟ್ಟು ಕಳಿಸಿದ್ದರಂತೆ. ಘಟನೆಯಿಂದ ನೊಂದ ಮಂಜುನಾಥ್ ಅವರು ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಮೂಲಕ ಎಎಸ್ಐ ಸಂಗೊಳ್ಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.