ಹಾವೇರಿ: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಈ ನಡುವೆಯೇ ಹಾವೇರಿಯಲ್ಲಿ 8 ವರ್ಷದ ಬಾಲೆಯೊಬ್ಬಳು ಮತದಾನದ ಜಾಗೃತಿ ಮೂಡಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಅಕ್ಕಿಆಲೂರಿನ ಎಂಟು ವರ್ಷದ ವಚನಾ ಚಿಲ್ಲೂರುಮಠ ಮತದಾನದ ಜಾಗೃತಿ ಮೂಡಿಸುತ್ತಿದ್ದಾಳೆ. ತಾನೇ ಬರೆದ ಕರಪತ್ರಗಳನ್ನು ಕೈಯ್ಯಲ್ಲಿ ಹಿಡಿದು ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಪ್ರಮಾಣವಚನ ಬೋಧಿಸುತ್ತಿದ್ದಾಳೆ. ಈಗಾಗಲೇ ಮೊದಲ ಹಂತದಲ್ಲಿ ಶೇ 80 ರಷ್ಟು ಮತದಾನವಾಗಿದೆ. ಪ್ರತಿಯೊಬ್ಬ ಮತದಾರ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಕಾಣಲು ಸಾಧ್ಯ ಎನ್ನುವ ಮಾತಿದೆ. ಈ ಹಿನ್ನೆಲೆ ಶೇಕಡಾವಾರು ಮತದಾನ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸುತ್ತಿದೆ. ಸರ್ಕಾರದ ಈ ಯೋಜನೆಗಳಿಗೆ ಬಾಲಕಿ ಸಾಥ್ ನೀಡುತ್ತಿದ್ದಾಳೆ.
ವಚನಾಳ ಈ ಜಾಗೃತಿಗೆ ಬೆನ್ನೆಲುಬಾಗಿ ತಂದೆ ಶಿವಬಸಯ್ಯ ಚಿಲ್ಲೂರುಮಠ ನಿಂತಿದ್ದಾರೆ. ಮಗಳಲ್ಲಿರುವ ಕಲೆಯನ್ನು ಕಂಡು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಹ ವಚನಾ ಜಾಗೃತಿ ಮೂಡಿಸಿದ್ದಳು. ಪ್ರಸ್ತುತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಹ ಮತದಾನದ ಜಾಗೃತಿ ಮೂಡಿಸುತ್ತಿದ್ದಾಳೆ. ಪ್ರಜಾಪ್ರಭುತ್ವದಲ್ಲಿ ಮತದಾನ ಪವಿತ್ರವಾದ ಕಾರ್ಯ. ಜೊತೆಗೆ ಯಾರೂ ಕೂಡ ಮತವನ್ನು ಮಾರಿಕೊಳ್ಳಬಾರದು, ಕಡ್ಡಾಯವಾಗಿ ಮತದಾನ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ತಿಳಿ ಹೇಳುತ್ತಿದ್ದಾಳೆ. ಮಗಳ ಈ ಪ್ರಯತ್ನವನ್ನು ತಂದೆ ಪೋಷಿಸುತ್ತಿದ್ದಾರೆ.