ಹಾವೇರಿ: ಬುಳ್ಳಾಪುರ ಗ್ರಾಮದ ಬಳಿ ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ನಾನಾ ಅನುಮಾನಗಳಿಗೆ ಕಾರಣವಾಗಿದೆ.
ಮೃತನನ್ನ 50 ವರ್ಷದ ಗದಿಗೆಪ್ಪ ತಿಮ್ಮೇನಹಳ್ಳಿ ಎಂದು ಗುರುತಿಸಲಾಗಿದೆ. ರಾಣೇಬೆನ್ನೂರು ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ಗದಿಗೆಪ್ಪ ರಟ್ಟಿಹಳ್ಳಿಗೆ ವಿಳ್ಯದೆಲೆ ಮಾರಲು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗದಿಗೆಪ್ಪನ ಮೃತದೇಹ ಮತ್ತು ಬೈಕ್ ರಸ್ತೆಯಿಂದ 10 ಅಡಿ ದೂರದಲ್ಲಿ ಬಿದ್ದಿದೆ. ಮೃತದೇಹದ ಮುಖ ಬೈಕ್‌ನ ಸೈಡ್ಬ್ಯಾಗ್ನಲ್ಲಿ ಸಿಕ್ಕಿಹಾಕಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಲ್ಲದೇ, ಮೃತದೇಹದ ಕಾಲುಗಳಲ್ಲಿ ರಕ್ತ ಕಾಣಿಸಿಕೊಂಡಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.