ಹಾವೇರಿ: ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಶನಿವಾರ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದಾನೆ. ಈ ಮಧ್ಯೆ ಕಳೆದು ಏಳು ದಿನಗಳಲ್ಲಿ ಸರಾಸರಿ ವಾಡಿಕೆ ಮಳೆ 33.4 ಮಿಮೀ ಮಳೆಯಾಗಬೇಕಿತ್ತು. ಆದರೆ, ಸುಮಾರು 108 ಮಿಮೀ ಮಳೆಯಾಗಿದೆ. ಒಟ್ಟಾರೆಯಾಗಿ ಮೇ, ಜೂನ್, ಜುಲೈ ತಿಂಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಸುಮಾರು 1130 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 989 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 14 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಹಾವೇರಿ ನಗರದಲ್ಲಿ ಎರಡು ಮನೆಗಳ ಧರೆಗುರುಳಿವೆ.
ಜಿಲ್ಲೆಯಲ್ಲಿ ಮಳೆಯಿಂದ ಇಲ್ಲಿಯವರೆಗೆ ಒಟ್ಟು 18 ಜಾನುವಾರುಗಳು ಅಸುನೀಗಿವೆ. ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ಸುಮಾರು 1 ಲಕ್ಷ 94 ಸಾವಿರ ಪರಿಹಾರವನ್ನ ವಿತರಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆಯಿಂದ ಮೂರು ಜನರು ಸಾವನ್ನಪ್ಪಿದ್ದಾರೆ. ಹಾನಗಲ್ ತಾಲೂಕಿನಲ್ಲಿ ಇಬ್ಬರು ಮತ್ತು ಹಾವೇರಿ ತಾಲೂಕಿನಲ್ಲಿ ಓರ್ವ ಮೃತಪಟ್ಟಿದ್ದಾರೆ. ಹಾನಗಲ್‌ನಲ್ಲಿ ನಾಗರಾಜ ಲಕ್ಕಪ್ಪ ಮುತ್ತಿನಹಾಳಗೆ ಸಿಡಿಲು ಬಡಿದು ಸಾವನ್ನಪ್ಪಿದ್ದರೆ. ಇನ್ನು ಯಮುನಪ್ಪ ಧರ್ಮಪ್ಪ ಬಂಡಿವಡ್ಡರ್ ನದಿಯಲ್ಲಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದರು. ಹಾವೇರಿ ತಾಲೂಕಿನ ಮಾಳಾಪುರ ಗ್ರಾಮದಲ್ಲಿ ಭಾಗ್ಯಾ ಮಲ್ಲಪ್ಪ ಚಳ್ಳಮರದ್ ಗೋಡೆ ಕುಸಿದು ಸಾವನ್ನಪ್ಪಿದ್ದರು.
ಮೃತ ಕುಟುಂಬಗಳಿಗೆ ಈಗಾಗಲೇ ಎನ್ಡಿಆರ್ಎಫ್ ಮಾನದಂಡಗಳ ಪ್ರಕಾರ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಪ್ರಸ್ತುತ ಮುಂಗಾರಿನಲ್ಲಿ ಮಳೆಯಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಸವಣೂರು ತಾಲೂಕು ಚಿಕ್ಕಮರಳಿಹಳ್ಳಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಾಳಜಿಕೇಂದ್ರದಲ್ಲಿ ಸುಮಾರು 21 ಕುಟುಂಬಗಳ 136 ಸದಸ್ಯರಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯಿಂದ ಸುಮಾರು 220 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಇದರ ಜೊತೆಗೆ ವಿದ್ಯುತ್ ಕಂಬಗಳು ಟ್ರಾನ್ಸಫಾರ್ಮರ್, ಜಿಲ್ಲೆಯ ಹೆದ್ದಾರಿಗಳು, ಗ್ರಾಮೀಣ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಮಧ್ಯೆ ಅಧಿಕ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದಿದೆ. ರೈತರು ಬೆಳೆಗಳಿಗೆ ಗೊಬ್ಬರ ಹಾಕುವುದು, ಕಸ ತಗೆಯುವುದು ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಸದ್ಯ ಮಳೆರಾಯ ಬಿಡುವು ನೀಡಿದ್ದು, ಇನ್ನು ಎರಡ್ಮೂರು ದಿನಗಳು ಮಳೆಯಾಗುವ ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.
ಅಧಿಕ ಮಳೆಗೆ ಟೊಮೆಟೊ ಬೆಳೆ ಹಾನಿ: ಪ್ರಸ್ತುತ ವರ್ಷ ಜೂನ್, ಜುಲೈ ತಿಂಗಳಲ್ಲಿ ಟೊಮೆಟೊ ಬೆಳೆದ ಹಲವು ರೈತರು ಅಧಿಕ ಲಾಭ ಕಂಡಿದ್ದಾರೆ. ಜುಲೈ ತಿಂಗಳಲ್ಲಿ ಟೊಮೆಟೊ ಬೆಲೆ 200 ರೂ. ಗಡಿ ದಾಟಿತ್ತು. 20 ಕೆಜಿ ತೂಕದ ಬಾಕ್ಸ್‌ಗಳಿಗೆ 1500 ರೂಪಾಯಿವರೆಗೆ ರೈತರಿಗೆ ದರ ಸಿಕ್ಕಿತ್ತು. ಒಂದು ಕಾಲದಲ್ಲಿ ಅಧಿಕ ಟೊಮೆಟೊ ಬೆಳೆದು ಹಾನಿ ಅನುಭವಿಸಿತ್ತಿದ್ದ ರೈತರು ಜೂನ್, ಜುಲೈ ತಿಂಗಳಲ್ಲಿ ಅತ್ಯಧಿಕ ಲಾಭಗಳಿಸಿದ್ದರು. ಆದರೆ, ಹಾವೇರಿ ಸಮೀಪದ ದೇವಗಿರಿಯ ರೈತ ದುರ್ಗಪ್ಪನದು ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ.
ದೇವಗಿರಿ ಗ್ರಾಮದ ದುರ್ಗಪ್ಪ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾನೆ. ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ, ಆದರೆ ಅಧಿಕ ಮಳೆಯಿಂದ ಟೊಮೆಟೊ ಕೊಳೆಯಲಾರಂಭಿಸಿದೆ. ಅಧಿಕ ಮಳೆಯಿಂದ ಜಮೀನಿಲ್ಲಿ ನೀರು ನಿಂತಿದ್ದು ಟೊಮೆಟೊ ನೆಲಕಚ್ಚಿದೆ. ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ದುರ್ಗಪ್ಪ ಟೊಮೆಟೊ ಬೆಳೆದಿದ್ದಾನೆ. ಉತ್ತಮ ಬೆಲೆ ಇಳುವರಿಯ ನಿರೀಕ್ಷೆಯಲ್ಲಿದ್ದ ದುರ್ಗಪ್ಪನಿಗೆ ಅಧಿಕ ಮಳೆ ಆಘಾತ ನೀಡಿದೆ. ಸುಮಾರು 15 ಲಕ್ಷ ರೂಪಾಯಿ ಲಾಭದ ನಿರೀಕ್ಷೆ ಮಾಡಿದ್ದ ದುರ್ಗಪ್ಪ ಇದೀಗ ಖರ್ಚು ಮಾಡಿದ ಹಣ ವಾಪಸ್ ಬರುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದಾನೆ. ಈಗ ಬೆಳೆದಿರುವ ಟೊಮೆಟೊ ಕಾಯಿಗಳನ್ನೇ ಕಿತ್ತು ಮಾರಾಟಕ್ಕೆ ಕಳಿಸುತ್ತಿದ್ದಾರೆ.
ಇದನ್ನೂ ಓದಿ: ಅಪಾಯದ ಮಟ್ಟದಲ್ಲಿ ಮೈದುಂಬಿ ಹರಿದ ಉತ್ತರಕನ್ನಡದ ಜಲಪಾತಗಳು: ಮೋಜು ಮಸ್ತಿ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ..!