ಹಾವೇರಿ: 2023 ರ ಚುನಾವಣೆ ನನ್ನ ಜೀವನದ ಕೊನೆಯ ಹೋರಾಟ, ನನ್ನ ಮೇಲೆ ನಿಜಕ್ಕೂ ವಿಶ್ವಾಸ ಇದ್ರೆ ಅವಕಾಶ ಕೊಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜನರಿಗೆ ಮನವಿ ಮಾಡಿದ್ದಾರೆ. ಹಿರೇಕೆರೂರಲ್ಲಿ ನಡೆದ ಜೆ.ಕೆ. ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ವರ್ಷಗಳ ಕಾಲ ನಾಡಿನ ಪ್ರತಿ ಕುಟುಂಬದ ಸಮಸ್ಯೆ ಕೇಳಲು ಪ್ರಯತ್ನಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದರು. ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಮುಖ್ಯಮಂತ್ರಿಯಾಗುತ್ತಿದ್ದಂತೆ ಯಾವ ನೀರಾವರಿ ಅಥವಾ ರಸ್ತೆ ಯೋಜನೆಗೆ ಅನುಮೋದನೆ ನೀಡಲಿಲ್ಲ. ಬದಲಿಗೆ ರೈತರ 25 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ಇದರ ಫಲವಾಗಿ ನೀವು ನನಗೆ ಏನು ಕೊಟ್ಟಿದ್ದೀರಿ?. ಅದೇ ನೀರಾವರಿ ರಸ್ತೆ ನಿರ್ಮಾಣ ಯೋಜನೆಗೆ ಮುಂದಾಗಿದ್ದರೆ ಪ್ರತಿಶತ 10 ರಷ್ಟು ಕಮೀಷನ್ ಬರುತ್ತಿತ್ತು ಎಂದು ತಿಳಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನನಗೆ ಸಿಎಂ ಆಗುವ ಮೊದಲೇ ಹಿರೇಕೆರೂರು ಗೊತ್ತಿತ್ತು. ಅಂದು ಬಣವಿಗೆ ಬೆಂಕಿ ಬಿದ್ದಾಗ ನಾನೇ ಖುದ್ದಾಗಿ ಬಂದು ಬಿ.ಸಿ.ಪಾಟೀಲ್ ಪರವಾಗಿ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದ್ದೆ. ಬಿ.ಸಿ.ಪಾಟೀಲ್ ದುರಾಹಂಕಾರ ದಬ್ಬಾಳಿಕೆ ಸರಿಯಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ ನನಗೂ ಶಾಶ್ವತವಲ್ಲ ಅವರಿಗೆ ಶಾಶ್ವತವಲ್ಲ. ಎಲ್ಲಿಯವರೆಗೆ ಮತದಾರರ ಪ್ರೀತಿ ವಿಶ್ವಾಸ ಇರುತ್ತದೆ ಅಲ್ಲಿಯವರೆಗೆ ಅಧಿಕಾರವಿರುತ್ತೆ. ದಬ್ಬಾಳಿಕೆ ದುರಹಂಕಾರ ಅಕ್ರಮ ಹಣದಿಂದ ಅಧಿಕಾರ ಸಂಪಾದನೆ ಮಾಡಲು ಆಗುವದಿಲ್ಲಾ ಎಂದು ಸಚಿವ ಬಿ.ಸಿ.ಪಾಟೀಲ್ ವಿರುದ್ಧ ವಾಗ್ಧಾಳಿ ನಡೆಸಿದರು.