ಹಾಸನ: ಹೊಡೆದಾಡುವ ರಾಜಕಾರಣ ಮಾಡಿದ್ದಕ್ಕೆ ನಿಮ್ಮ ಕ್ಷೇತ್ರದಲ್ಲಿ ನಿಮಗೆ ಸೋಲುಂಟಾಯಿತು ಎಂದು ಸಿ.ಟಿ.ರವಿ, ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ನಗರದಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಟಿ.ರವಿ, ಕೋಮುವಾದಿ ಪಕ್ಷ ಅಂತಾ ಬಿಜೆಪಿಯನ್ನು ಜನರೆದುರು ಜರಿಯುತ್ತಿದ್ದಾರೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಯಾರು ಎಂಬುದನ್ನು ಜನರೇ ತೋರಿಸಿಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆಯಲ್ಲಿ ಸಿಂಗಲ್ ಡಿಜಿಟ್ ಕೂಡ ಪಾಸ್ ಆಗಲ್ಲ ಎಂದಿದ್ದವರು ಸಿಂಗಲ್ ಡಿಜಿಟ್ಗೆ ಬಂದರು. ಮೈತ್ರಿ ಪಕ್ಷದ ವರಿಷ್ಠರು ಈಗ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ನನ್ನ ವಿರೋಧವಿಲ್ಲ. ಯಾವತ್ತೂ ಕೂಡ ಮೋದಿಯವರು ಗ್ರಾಮ ವಾಸ್ತವ್ಯದ ನಾಟಕ ಮಾಡಿಲ್ಲ. ಯಾಕಂದರೆ ಅವರು ಕೊಡುವ ಎಲ್ಲಾ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ಪಕ್ಷಾತೀತವಾಗಿ ತಲುಪುತ್ತಿವೆ. ಇದು ನಮ್ಮ ಪಕ್ಷಕ್ಕೂ ಮತ್ತು ಇತರೆ ಪಕ್ಷಕ್ಕೂ ಇರುವ ವ್ಯತ್ಯಾಸ. ಇನ್ನು ಪ್ರತಿ ಬಾರಿ ಕೂಡ ಕಣ್ಣೀರಿನ ಮೂಲಕ ಮತದಾರರನ್ನು ಒಲಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಗಳಲ್ಲಿ ಹೊಳೆನರಸಿಪುರ ಕೂಡ ಬಿಜೆಪಿ ಪಾಲಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ಭವಿಷ್ಯ ನುಡಿದರು.
ಐಎಂಎ ಕಂಪನಿಯವರ ಜೊತೆ ಮೈತ್ರಿ ಪಕ್ಷದ ಕೆಲವು ಮುಖಂಡರು ಬಿರಿಯಾನಿ ತಿಂದು ಮುಸ್ಲಿಂ ಜನಾಂಗದ ಬಡ ಕುಟುಂಬದವರಿಗೆ ದೋಖಾ ಮಾಡಿದ್ದಾರೆ. ಈಗ ಬಿಜೆಪಿ ಮೇಲೆ ಗೂಬೆ ಕೂರಿಸೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹಿಂದೆ ಬಿಜೆಪಿ ಪಕ್ಷವನ್ನು ಹೀಯಾಳಿಸುತ್ತಿದ್ದರು. ಆದರೆ ನಾವು ಪಕ್ಷದ ಸಿದ್ಧಾಂತವನ್ನು ಬದಲಾಯಿಸದೇ ವಿಚಾರಗಳ ಮೇಲೆ ಕೆಲಸ ಮಾಡುತ್ತಾ ಬಂದ ಪರಿಣಾಮ ನಮ್ಮ ಪಕ್ಷ ಮುಂಚೂಣಿಯಲ್ಲಿ ಬರಲು ಸಾಧ್ಯವಾಯಿತು. ಹಿಂದೆ ನಮ್ಮ ಪಕ್ಷದ ಮೇಲೆ ಎಷ್ಟು ದೌರ್ಜನ್ಯಗಳು ಆದವು ಎಂಬುದನ್ನು ನಾವಿನ್ನೂ ಮರೆತಿಲ್ಲ. ಆದರೆ ಅವೆಲ್ಲವನ್ನ ಪಕ್ಷ ಸಂಘಟನೆಗೆ ಒಂದಾಗಿ ಇವತ್ತು ರಾಜ್ಯ ಅಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಕೂಡ ಬಿಜೆಪಿ ಪಕ್ಷ ಏನೆಂಬುದನ್ನು ತೋರಿಸಿಕೊಟ್ಟಿದ್ದೇವೆ. ಆದರೆ ಇದಕ್ಕೆ ನಾವು ಬೀಗಬಾರದು. ಬದಲಿಗೆ ಪಕ್ಷ ಸಂಘಟನೆಗೆ ಮತ್ತಷ್ಟು ಕೆಲಸ ಮಾಡಬೇಕು ಎಂದು ಸಿ.ಟಿ.ರವಿ ಕಿವಿಮಾತು ಹೇಳಿದರು.