ಹಾಸನ: ಮನೆ ಖರೀದಿಸುವ ಮೂಲಕ ಅಮ್ಮನ ಆಸೆಯನ್ನು ಪೂರೈಸಿರುವುದರ ಜೊತೆಗೆ ಯಶೋಮಾರ್ಗ ಮಾಡುತ್ತಿದ್ದ ಯಶ್ ಇದೀಗ ಕೃಷಿ ಮಾರ್ಗವನ್ನು ಕೂಡ ಮಾಡಿ ರೈತರಿಗೆ ಮತ್ತಷ್ಟು ಮಾದರಿಯಾಗಿದ್ದಾರೆ.
ಹೌದು, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ನೂತನವಾಗಿ ತೋಟ, ಮನೆ ಖರೀದಿಸಿದ್ದಾರೆ. ಅಷ್ಟೇ ಅಲ್ಲದೇ ಯಶ್ ತಮ್ಮ ತಾಯಿಯ ಆಸೆಯಂತೆ ಹಾಸನ ನಗರದ ವಿದ್ಯಾನಗರದಲ್ಲಿ ತಾಯಿಗಾಗಿ 2.5 ಕೋಟಿ ವೆಚ್ಚದ ಮನೆಯೊಂದನ್ನ ಖರೀದಿಸಿ ಗಿಫ್ಟ್ ನೀಡಿದ್ದಾರೆ.
ಜಿಲ್ಲೆಯ ವಿದ್ಯಾನಗರದಲ್ಲಿ ಮನೆ ಖರೀದಿಸುವುದು ಯಶ್ ತಾಯಿಯ ಬಹಳ ವರ್ಷದ ಆಸೆಯಾಗಿತ್ತು. ಇನ್ನು ಹುಟ್ಟೂರಿನ ಮೇಲಿರುವ ಅಭಿಮಾನದಿಂದ ಜಿಲ್ಲೆಯಲ್ಲಿ ಯಶ್ ಆಸ್ತಿ ಖರೀದಿಸಿದ್ದಾರಂತೆ. ಕಳೆದ ಕೆಲ ತಿಂಗಳ ಹಿಂದೆ ತೋಟ ಮತ್ತು ಮನೆ ಖರೀದಿಸಿರುವ ಯಶ್ ತಮ್ಮ ತಾಯಿಯವರ ಹುಟ್ಟೂರು ಹಾಸನದ ದೊಡ್ಡಕೊಂಡಗೊಳ ಗ್ರಾಮದಲ್ಲಿ ಕೃಷಿ ಮಾಡಿ ರೈತರಿಗೆ ಅರಿವು ಮೂಡಿಸುವ ಹೊಸ ಸಾಹಸಕ್ಕೂ ಕೂಡಾ ಕೈ ಹಾಕಿದ್ದಾರೆ.
ಕೆಲಸದ ಒತ್ತಡದಿಂದ ಹೊರಬಂದು ಬಿಡುವಿನ ವೇಳೆಯನ್ನು ತನ್ನೂರಲ್ಲೇ ಕಳೆಯಲು ಬಯಸಿದ್ದು, ಹುಟ್ಟೂರಿನ ಮೇಲಿರುವ ಅಭಿಮಾನವೇ ಯಶ್ ಅವರಿಗೆ ವಿದ್ಯಾನಗರದಲ್ಲೊಂದು ಸ್ವಂತ ಮನೆ ಖರೀದಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಕೃಷಿ ಕುಟುಂಬದಿಂದ ಬಂದ ಯಶ್ ಅಟ್ಟಾವರ ಬಳಿ ಮಾವು, ಸಪೋಟ, ಗೋಡಂಬಿ ತೋಟವನ್ನು ಖರೀದಿಸಿದ್ದು, ಮುಂದಿನ ದಿನದಲ್ಲಿ ಸಾವಯವ ಕೃಷಿ ಮಾಡುವ ಮೂಲಕ ರೈತರಿಗೆ ಮಾದರಿಯಾಗಲು ಮುಂದಾಗಿದ್ದಾರೆ. ಮಗನ ಈ ಒಳ್ಳೆಯ ಕಾರ್ಯಕ್ಕೆ ಅವರ ತಂದೆ-ತಾಯಿ ಕೂಡ ಸಾಥ್ ಕೊಟ್ಟಿದ್ದು, ಈಗಾಗಲೇ ಕೃಷಿ ಕಾರ್ಯದಲ್ಲಿ ಯಶ್ ಪೋಷಕರು ತೊಡಗಿದ್ದಾರೆ.