ಹಾಸನ: ವಿಶ್ವ ಜಲ ದಿನವನ್ನು ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡುವ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾರ್ಚ್ 22 ರಂದು ನಡೆಯುವ ವಿಶ್ವ ಜಲ ದಿನ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಜಲ ಮೂಲಗಳನ್ನು ಗುರುತು ಮಾಡಿ, ಕಲ್ಯಾಣಿಯ ಸರ್ವೆಗಳನ್ನು ಮಾಡಿ ಒತ್ತುವರಿ ಜಾಗವನ್ನು ತೆರವು ಮಾಡಬೇಕಿದೆ ಎಂದು ಸಲಹೆ ನೀಡಿದರು.
ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಏಕ ಕಾಲದಲ್ಲಿ ವಿಶ್ವ ಜಲ ದಿನ ಹಾಗೂ ಮಾರ್ಚ್ 22 ರಿಂದ ಪ್ರಾರಂಭವಾಗಿ ಮೇ 21 ರಂದು ನಡೆಯುವ ವಿಶ್ವ ಭೂ ದಿನದವರಗೆ ಜಲ ಸಂರಕ್ಷಣೆ ಮಾಸಚರಣೆಯನ್ನು ಸಾಂಕೇತಿಕವಾಗಿ ಮಾಡಬೇಕು ಹಾಗೂ ಸಣ್ಣ-ಪುಟ್ಟ ಜಲಧಾರೆಗಳು, ಕೆರೆಕಟ್ಟೆ, ಕಲ್ಯಾಣಿಗಳನ್ನು ಗುರುತಿಸಿ ಪುನಶ್ಚೇತನ ಕಾರ್ಯವನ್ನು ಪ್ರಾರಂಭ ಮಾಡಬೇಕು ಎಂದು ತಿಳಿಸಿದರು.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನದಲ್ಲಿ ವೈಪರಿತ್ಯ ಆಗುತ್ತಿರುವುದರಿಂದ ಪರಿಸರದ ಸಮತೋಲನಕ್ಕೆ ಗಿಡಗಳನ್ನು ಬೆಳೆಸುವುದು ಹಾಗೂ ಎಲ್ಲಾ ಜೀವ ಸಂಕುಲಗಳ ಉಳಿವಿನ ದೃಷ್ಠಿಯಿಂದ ಅಂತರ್ ಜಲ ರಕ್ಷಣೆಗೆ ಮಹತ್ವ ನೀಡಬೇಕಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಹಸಿರು ಭೂಮಿ ಪ್ರತಿಸ್ಥಾನದೊಂದಿಗೆ, ಗ್ರಾಮಸ್ಥರನ್ನು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.