ಹಾಸನ: ಕೊಲೆ ಸುಪಾರಿ ಒಂದರಲ್ಲಿ ಜೈಲುಪಾಲಾಗಿದ್ದ ಮಹಿಳೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಹಾಸನ ನಗರದ ಹೊರವಲಯದಲ್ಲಿ ನಡೆದಿದೆ.
ಗೌರಮ್ಮ (50) ಕೊಲೆಯಾದ ಮಹಿಳೆಯಾಗಿದ್ದು, ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದ ಹನುಮಂತಪುರ ಗ್ರಾಮದಲ್ಲಿ ನಡೆದಿದೆ. ಮೃತ ಶಂಕರೇಗೌಡ ಎಂಬುವರ ಎರಡನೇ ಪತ್ನಿಯಾಗಿರುವ ಗೌರಮ್ಮ, ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಸುಪಾರಿ ಕೊಟ್ಟು ಜೈಲು ಪಾಲಾಗಿದ್ದಳು. ಬಳಿಕ ಹನುಮಂತಪುರದಲ್ಲಿ ಒಂಟಿಯಾಗಿ ವಾಸವಾಗಿದ್ದ ಆಕೆಯನ್ನು ಇಂದು ಸಂಜೆ ಕಾರಿನಲ್ಲಿ ಬಂದ ಹಂತಕರು ಮನೆಗೆ ನುಗ್ಗಿ ಮನಸೋ ಇಚ್ಚೆ ಲಾಂಗು-ಮಚ್ಚುಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಕೆಲವರು ಆಸ್ತಿ ವಿಚಾರಕ್ಕೆ ಹಿಂದೆ ಸಂಬಂಧಿಕರ ನಡುವೆ ಜಗಳ ನಡೆದಿತ್ತು ಎಂಬ ಅನುಮಾನ ವ್ಯಕ್ತಪಡಿಸಿದರೆ, ಕೆಲವರು ಬಡ್ಡಿ ವಿಚಾರದಲ್ಲಿ ಕೆಲವರೊಂದಿಗೆ ದ್ವೇಷ ಕಟ್ಟಿಕೊಂಡಿದ್ದಳು ಎಂಬುದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಕೊಲೆಯಾದ ಗೌರಮ್ಮನ ಗಂಡ ಕೆಎಸ್ಆರ್ಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತಪಟ್ಟ ಮೇಲೆ ಅದೇ ಕೆಲಸ ಕೊಲೆಯಾದ ಗೌರಮ್ಮನ ಮಗನಿಗೆ ಸಿಕ್ಕಿತ್ತು. ಅಲ್ಲದೇ ಈಕೆ ಸಣ್ಣಪ್ರಮಾಣದಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, ಬಡ್ಡಿ ದಂಧೆಯ ವಿಚಾರದಲ್ಲಿ ಕೊಲೆಯಾಗಿರಬಹುದು ಎಂಬ ಅನುಮಾನವನ್ನು ಕೂಡ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇನ್ನು ಮೃತ ಗೌರಮ್ಮಳ ಮೃತದೇಹವನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಶವಾಗಾರಕ್ಕೆ ರವಾನಿಸಿದ್ದು, ಹಂತಕರ ಕೆಲವು ಹೆಜ್ಜೆ ಗುರುತುಗಳನ್ನು ಆಧರಿಸಿ ಈಗಾಗಲೇ ಮೂರು ತಂಡ ರಚಿಸಿರುವ ಪೊಲೀಸರು, ಒಂದೆರಡು ದಿನದಲ್ಲಿ ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.