ಅರಸೀಕೆರೆ: ಕ್ಷುಲ್ಲಕ ಕಾರಣಕ್ಕೆ ಪ್ರಿಯತಮೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆವೊಂದು ಜಿಲ್ಲೆಯ ಅರಸೀಕೆರೆಯ ಪಟ್ಟಣದಲ್ಲಿ ನಡೆದಿದೆ.
ಗಾಂಧಿನಗರ ನಿವಾಸಿ ಲೋಕೇಶ್ ಎಂಬುವರ ಪತ್ನಿ ಮಂಜುಳಾ (30) ಪ್ರಿಯಕರನಿಂದಲೇ ಹತ್ಯೆಯಾಗಿರುವ ಗೃಹಿಣಿ. ಪಟ್ಟಣದ ಮಿನಿ ವಿಧಾನಸೌಧದ ಹಿಂಭಾಗದ ರಸ್ತೆಯಲ್ಲಿನ ಮನೆಯೊಂದರಲ್ಲಿ ವಾಸವಾಗಿದ್ದ ಮಂಜುಳಾರ ಮನೆಗೆ ಬಂದಿದ್ದ ಸೋಮಶೇಖರ್ ಮಹಿಳೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದೇನೆ ಎಂದು ಆರೋಪಿಸಲಾಗಿದೆ.
ತಿಪಟೂರು ತಾಲೂಕು ಹೊನ್ನಳ್ಳಿ ಕೋಡಿಹಳ್ಳಿ ಗ್ರಾಮದ ಮಂಜುಳಾಳನ್ನು 12 ವರ್ಷಗಳ ಹಿಂದೆ ಅರಸೀಕೆರೆಯ ಲೋಕೇಶ್ ಜತೆಗೆ ವಿವಾಹ ಮಾಡಿಕೊಡಲಾಗಿತ್ತು. ಈಕೆ ಪತಿಯನ್ನು ತೊರೆದು ಬೈರಗೊಂಡನಹಳ್ಳಿ ಭೋವಿ ಕಾಲೊನಿಯ ಸೋಮಶೇಖರ್ನೊಂದಿಗೆ ಮೂರು ವರ್ಷಗಳಿಂದ ವಾಸವಿದ್ದಳು. ಶುಕ್ರವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆಕೆ ಮೇಲೆ ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.
ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಂಜುಳಾಳನ್ನು ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. ಇನ್ನು ಈ ಸಂಬಂಧ ಅರಸೀಕೆರೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.