ಹಾಸನ/ಸಕಲೇಶಪುರ: ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಮಹಿಳೆಯೊಬ್ಬರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ಘಟನೆ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ನಡೆದಿದೆ.
ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ದಾಟುತ್ತಿದ್ದ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಕಾರಿನಿಂದ ಇಳಿದು ಓಡಿಹೋದ ಚೈತ್ರಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗಕ್ಕೆ ಸೊಂಡಿಲಿನಿಂದ ಹೊಡೆದ ಪರಿಣಾಮ ನಜ್ಜುಗುಜ್ಜಾಗಿದೆ.
ಕಾಡಾನೆಯ ಅಟ್ಟಹಾಸಕ್ಕೆ ಮಲೆನಾಡಿಗರು ಬೆಚ್ಚಿಬಿದ್ದಿದ್ದು, ಪುಂಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆ ಹಿಡಿದಿದ್ದು, ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಈಗ ಮತ್ತೆ ಕಾಡಾನೆ ರಾಜ್ಯ ಹೆದ್ದಾರಿಗೆ ಕಾಲಿಡುತ್ತಿದ್ದು, ಮಲೆನಾಡಿಗರು ಓಡಾಡಲು ಭಯಪಡುವಂತಾಗಿದೆ.