ಹಾಸನ: ನಮಗೆ ಸರಿ ದಾರಿ ತೋರಿಸಿ ವಿದ್ಯೆ, ಬುದ್ದಿ ಹೇಳಿ ಕೊಟ್ಟ ಶಿಕ್ಷಕನಿಗೆ ನಾವು ಮೊದಲು ನಮಸ್ಕರಿಸುತ್ತೇವೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜು ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕನ ಪಾತ್ರ ಬಹಳ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ರೂಪಿಸಿ ಗೆಲುವಿನ ದಾರಿ ದೀಪವಾಗಿ ನಿಲ್ಲುವವರು ಶಿಕ್ಷಕರು. ಹಾಗಾಗಿ ಅವರಿಗೆ ಗೌರವ ಕೊಡುವ ಮನೋವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇನ್ನೂ ಶಿಕ್ಷಣದ ವಿಚಾರದಲ್ಲಿ ನಮ್ಮ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿಕೊಂಡು ಬಂದಿದ್ದು, ಇದನ್ನೇ ಮುಂದುವರೆಸಿಕೊಂಡು ಹೋಗುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.
ಜಾನಪದ ವಿದ್ವಾಂಸಕ ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಮಕ್ಕಳನ್ನು ಉತ್ತಮ ದಾರಿಗೆ ತಂದು ಒಳ್ಳೆ ಪ್ರಜೆಯನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಶಿಕ್ಷಕರ ದಿನಾಚರಣೆ ಕೇವಲ ಒಂದು ಕಾರ್ಯಕ್ರಮವಾಗದೇ ಆತ್ಮಾವಲೋಕನ ಸಭೆಯಾಗಿ ಪರಿಣ ಮಿಸಬೇಕು ಎಂದರು.
ಈ ವೇಳೆ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಪದವಿಪೂರ್ವ ಶಿಕ್ಷಣ ಇಲಾಖೆಯ ಭಾನುಮತಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಂಜೇಗೌಡ, ಸುಬ್ಬಶೆಟ್ಟಿ, ಶಾಲಾ ಶಿಕ್ಷಕರ ಸಂಘದ ದೇವೇಗೌಡ, ಲೋಕೇಶ್, , ಕತ್ತಿಮಲ್ಲೇನಹಳ್ಳಿ ಪರಮೇಶ್ ಇತರರು ಹಾಜರಿದ್ದರು.