ಹಾಸನ: ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆ ಹಿಂಪಡೆಯುವ ಮಾತೇ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯ ಆಧಾರದ ಮೇಲೆ ಪಕ್ಷದ ವರಿಷ್ಠರು ಸರ್ಕಾರದ ಮುಖಾಂತರ ಈಡೇರಿಸುವಂತಹ ಕೆಲಸ ಮಾಡುತ್ತಾರೆ. ನಾವು ಹಿಂದೆ ನೀಡಿದಂತಹ ಪ್ರಣಾಳಿಕೆಯ ಬಹುತೇಕ ಭರವಸೆಗಳನ್ನು ಈಡೇರಿಸಿದ ಹಿನ್ನೆಲೆಯಲ್ಲಿ ಮತ್ತೆ ನಮಗೆ ಜನಾದೇಶ ಸಿಕ್ಕಿದ್ದು, ಜನರಿಗಾಗಿ ಮತ್ತಷ್ಟು ಸುಭದ್ರ ಭಾರತವನ್ನು ಮಾಡಲು ಹೊರಟಿದ್ದೇವೆ. ಹಾಗಾಗಿ ನಮ್ಮ ದೇಶದ ಕೆಲವು ನಿಯಮ ಕಟ್ಟುಪಾಡುಗಳನ್ನು ಅಮೆರಿಕದ ಜನರಷ್ಟೇ ಅಲ್ಲ, ಇತರ ದೇಶಗಳು ಕೂಡ ಕೊಂಡಾಡುತ್ತೇವೆ ಎಂದರು.
ಇನ್ನು ಆರ್ಥಿಕ ಸುಭದ್ರತೆಗೆ ನಾವು ಹೆಚ್ಚು ಆದ್ಯತೆ ನೀಡಿದ್ದು, ಈಗಾಗಲೇ ರಸ್ತೆ ವಿಮಾನ ಮುಂತಾದ ಎಲ್ಲಾ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದೇವೆ. ಲಂಚಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶ ನಮ್ಮದು. ಕಾಶ್ಮೀರಕ್ಕೂ ನಾವು ಸ್ವಾತಂತ್ರ್ಯ ಕೊಟ್ಟಿದ್ದೇವೆ. ರಾಮಜನ್ಮಭೂಮಿ ನಮ್ಮ ಪ್ರಣಾಳಿಕೆಯ ಅಂಶ. ಸುಪ್ರೀಂಕೋರ್ಟ್ ಕೂಡ ಅದನ್ನು ಎತ್ತಿ ಹಿಡಿದಿದ್ದು ಮತ್ತಷ್ಟು ಖುಷಿ ತಂದಿದೆ. ಇದರ ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಕೂಡ ದೇಶಕ್ಕೆ ಉತ್ತಮ ಬೆಳವಣಿಗೆ. ಇದನ್ನು ಎಡಪಂತಿಯರು ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದ್ರೆ, ಪೌರತ್ವದ ನೈಜತೆಯನ್ನು ತಿಳಿಯಪಡಿಸುವ ಉದ್ದೇಶ ನಮ್ಮದು. ಹಾಗಾಗಿ ಮನೆ ಮನೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋಗಳು ನೋಡಿದರೆ ಅವರು ಬರೀ ಕ್ಯಾಸೆಟ್ ಮನುಷ್ಯ ಎನಿಸುತ್ತದೆ. ಕ್ಯಾಸೆಟ್ ಮಾಡ್ಕೊಂಡು ಅದನ್ನ ತಂತ್ರಾಂಶಗಳಿಂದ ನಕಲಿ ವಿಡಿಯೋಗಳನ್ನ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ. ಅವರು ಗಂಭೀರವಾಗಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಅವರು ಹಲೋ ಬ್ರದರ್ ಹೇಗಿದ್ದೀರಾ ಎಂಬಂತೆ ಹುಡುಗಾಟದ ಮೂಲಕವೇ ಆಡಳಿತ ನಡೆಸಿದ್ದಾರೆ ಅಂತ ಟಾಂಗ್ ಕೊಟ್ಟರು.
ಇನ್ನು ಮಹಾದಾಯಿ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಆ ಸಭೆಯಲ್ಲಿ ಮಹದಾಯಿ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೊರಗಿಟ್ಟು, ಬಜೆಟ್ ಮಂಡನೆ ಮಾಡಲು ಹೊರಟಿರುವುದು ಕೆಂಗಣ್ಣಿಗೆ ಗುರಿಯಾಗಿದೆ ಎಂಬ ಪ್ರಶ್ನೆಗೆ ಯಾವುದೊಂದು ಕಾರ್ಯವಾಗಬೇಕಾದ್ರೆ ನಮಗಿಂತ ಮೇಲ್ಪಟ್ಟವರು ಅದನ್ನು ಯೋಚಿಸಿ ಕೆಲಸ ಮಾಡುತ್ತಾರೆ. ಅವರನ್ನು ಹೊರಗಿಟ್ಟ ಮಾತ್ರಕ್ಕೆ ಅನ್ಯತಾ ಭಾವಿಸುವುದು ಬೇಡ. ಕೆಲವೊಂದು ವಿಚಾರದಲ್ಲಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡು ಸರ್ಕಾರದ ಮಂತ್ರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನನಗೂ ಹಿಂದೆ ಸಾಕಷ್ಟು ಅನುಭವ ಆಗಿದೆ. ನನ್ನ ಮೇಲೆ ಹೆಚ್ಚು ಹೊರೆ ಹಾಕೋದು ಬೇಡ ಎಂಬ ಕಾರಣಕ್ಕೆ ಆ ರೀತಿ ಮಾಡಲಾಗುತ್ತದೆ ಎಂದು ಮಾತಿಗೆ ಪೂರ್ಣ ವಿರಾಮ ಇಟ್ಟರು.