ಹಾಸನ: ವಿಶ್ವಕರ್ಮರು ದೇವಶಿಲ್ಪಿಗಳು. ಇದೇ ಜನಾಂಗದವರು ದೇವತೆಗಳಿಗೆ ಸ್ವರ್ಗವನ್ನು ಕಟ್ಟಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಭೂಲೋಕದಲ್ಲಿರುವ ವಿವಿಧ ದೇವತೆಗಳ ಶಿಲ್ಪಿಯಾಗಿ ಗುರುತಿಸಿಕೊಂಡಂತಹ ಜನಾಂಗವೇ ವಿಶ್ವಕರ್ಮ ಎಂದು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ವಿಶ್ವಕರ್ಮ ಜಯಂತಿಯನ್ನು ಆಚರಿಸಿ ನಂತರ ಮಾತನಾಡಿದ ಅವರು, ಪ್ರತಿವರ್ಷ ವಿಶ್ವಕರ್ಮ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಆದರೆ ಈ ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲಾ ಜಯಂತಿಗಳನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿರುವುದರಿಂದ ಈ ಜಯಂತಿಯನ್ನು ಕೂಡ ಕೇವಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರಳವಾಗಿ ತಮ್ಮಗಳ ಸಮ್ಮುಖದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಿಂದೆ ದೇವತೆಗಳಿಗೆ ಶಿಲ್ಪಿಯಾಗಿದ್ದ ವಿಶ್ವಕರ್ಮರು, ಸ್ವರ್ಗವನ್ನೇ ಕಟ್ಟಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದಲ್ಲದೆ ಭೂಲೋಕದಲ್ಲಿಯೂ ಕೂಡ ವಿವಿಧ ದೇವಾನು ದೇವತೆಗಳನ್ನು ಸೃಷ್ಟಿ ಮಾಡಿದ ಶಿಲ್ಪಿಗಳಾಗಿದ್ದಾರೆ. ಇವತ್ತು ಚಿನ್ನದ ಕೆಲಸ, ಶಿಲ್ಪ ಕಲೆ, ಮರಗೆಲಸ ಹೀಗೆ ಹತ್ತು ಹಲವು ವೃತ್ತಿಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಪ್ರತಿ ನಿತ್ಯ ವಿಶ್ವಕರ್ಮರನ್ನ ನಾವು ಯಾವುದಾದರೊಂದು ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ನಿಮ್ಮಗಳ ಸೇವೆ ಸಮಾಜಕ್ಕೆ ಅತ್ಯಮೂಲ್ಯವಾಗಿದೆ. ನಿಮ್ಮ ಈ ಕಾರ್ಯಕ್ಕೆ ನಮ್ಮ ಸರ್ಕಾರದ ವತಿಯಿಂದ ಕೂಡ ಧನ್ಯವಾದಗಳು ಎಂದರು.
ವಿಶ್ವಕರ್ಮ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಈಗಾಗಲೇ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿದ್ದು, ಅದರ ಮುಖಾಂತರ ತಾವು ಸರ್ಕಾರದ ಸೌಲಭ್ಯಗಳನ್ನು ಅತಿಹೆಚ್ಚು ಬಳಸಿಕೊಂಡು ಬದುಕನ್ನು ಮತ್ತಷ್ಟು ಉಜ್ವಲಗೊಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.