ಹಾಸನ : ಪ್ರಕೃತಿ ವಿಕೋಪದಿಂದ ವಾಸದ ಮನೆ ಹಾನಿಯಾಗಿದ್ದು, ಸರ್ಕಾರದಿಂದ ಆಶ್ರಯ ಯೋಜನೆಯಡಿ ನಿವೇಶನ ಸಿಗುವವರೆಗೂ ತಾತ್ಕಾಲಿಕ ವ್ಯವಸ್ಥೆಗೆ ಅವಕಾಶ ಮಾಡಿ ಕೊಡುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರಿಗೆ ಸಂತ್ರಸ್ತ ಕುಟುಂಬ ಮನವಿ ಸಲ್ಲಿಸಿತು.
ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಮಾಗೇರಿ ಗ್ರಾಮವು ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದೆ. ವಾಸದ ಮನೆಗಳೆಲ್ಲಾ ಶಿಥಿಲಗೊಂಡಿದ್ದು, ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ನಿತ್ಯ ಜೀವ ಭಯದಲ್ಲಿ ಬದುಕು ನಡೆಸುತ್ತಿದ್ದೇವೆ ಎಂದು ಕುಟುಂಬದ ನಾಲ್ವರು ಸದಸ್ಯರು ಮನವಿ ಮಾಡಿದರು.
ಮಾಗೇರಿ ಗ್ರಾಮದ ಸರ್ವೆ ನಂ. 63ರಲ್ಲಿ ತಾತ್ಕಲಿಕವಾಗಿ ವಾಸಿಸುತ್ತಿದ್ದು, ಸ್ಥಳೀಯರು ರಾಜಕೀಯ ಪುಡಾರಿಗಳು ನಮ್ಮ ಕುಟುಂಬಕ್ಕೆ ಇಲ್ಲದ ಆರೋಪ ಮತ್ತು ಹಿಂಸೆ ನೀಡಿ, ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಮನೆ ಹಾನಿಯಾಗಿರುವುದರಿಂದ ತಾತ್ಕಾಲಿಕವಾಗಿ ಮತ್ತೊಂದು ಜಾಗದಲ್ಲಿ ವಾಸವಾಗಿದ್ದೇವೆ. ಸರ್ಕಾರವು ಆಶ್ರಯ ಯೋಜನೆಯಲ್ಲಿ ನಿವೇಶನ ನೀಡಿದ ಬಳಿಕ ನಾವೇ ಸ್ವಯಂ ಪ್ರೇರಿತವಾಗಿ ಜಾಗ ಖಾಲಿ ಮಾಡಲು ಸಿದ್ದರಿದ್ದೇವೆ ಎಂದರು. ಅಲ್ಲದೇ ನಮಗೆ ಶಾಶ್ವತ ವ್ಯವಸ್ಥೆಯಾಗುವವರೆಗೂ ತಾತ್ಕಾಲಿಕ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು.
ಜೊತೆಗೆ ತಾತ್ಕಲಿಕವಾಗಿ ಮನೆ ನಿರ್ಮಿಸಿ ವಾಸ ಮಾಡುತ್ತಿರುವ ಜಾಗವು ಯಾವ ಸರ್ಕಾರಿ ಶಾಲೆ ಅಥವಾ ಸಂಸ್ಥೆಗಳಿಗೆ, ಸಾರ್ವಜನಿಕ ಉಪಯೋಗಕ್ಕೆ ಒಳಪಟ್ಟಿರುವುದಿಲ್ಲ ಎಂದು ಹೇಳಿದರು.