ಹಾಸನ: ರಾಜ್ಯದಲ್ಲಿನ ಡ್ರಗ್ಸ್ ಮಾಫಿಯಾ ದಂಧೆ ಇಂದು ನೆನ್ನೆಯದಲ್ಲ. ಅವರು ಮಾಫಿಯಾದವರು ಎಷ್ಟೇ ದೊಡ್ಡವರಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಖಡಕ್ ಎಚ್ಚರಿಕೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳ ಅವಧಿಯಲ್ಲಿನ ಡ್ರಗ್ಸ್ ಮಾಫಿಯಾ ಬಗ್ಗೆ ಚರ್ಚೆ ಮಾಡಿದ್ದೇವೆ. ಇದು ಲಾಜಿಕಲ್ ಎಂಡ್‌ಗೆ ಹೋಗಲಿದೆ. ಇದಕ್ಕೆ ತಾತ್ವಿಕ ಅಂತ್ಯ ಕಾಣಿಸಲು ಸಿಎಂ, ಗೃಹ ಇಲಾಖೆ, ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಲಿದೆ ಎಂದರು.
ಕೊರೊನಾ ಸಮಸ್ಯೆ ನಿರ್ವಹಿಸಲಾಗದೆ ಸರ್ಕಾರ ಇಬ್ಬರನ್ನ ಬಂಧಿಸಿ ವಿಷಯಾಂತರಿಸಿ ಜನರ ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲೇ ನಾಲ್ಕೈದು ಗುಂಪುಗಳಿವೆ. ಅವರಿಗೆ ಮಾಡೋಕೆ ಈಗ ಕೆಲಸವಿಲ್ಲ. ಕಾಂಗ್ರೆಸ್ನವರು ತೊಳಲಾಟದಲ್ಲಿದ್ದಾರೆ ಎಂದು ಟೀಕಿಸಿದರು.
ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬ ಪರಿಸ್ಥಿತಿಯಲ್ಲಿ ಕಾಂಗ್ರೆಸ್ನವರಿದ್ದಾರೆ. ಅವರು ದಿಗ್ಭ್ರಾಂತರಾಗಿದ್ದಾರೆ. ಏನು ಕೆಲಸ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಯಾರಾದರೂ ಜನ್ರ ದಿಕ್ಕು ತಪ್ಪಿಸುವಂತಹ ಕೆಲಸ ಮಾಡುತ್ತಿದ್ದರೆ ಅದು ಕಾಂಗ್ರೆಸ್ನವರೇ ವಿನಾ ನಾವಲ್ಲ. ಡ್ರಗ್ಸ್ ವಿಚಾರದಲ್ಲಿ ಯಾರೂ ಯಾರನ್ನೂ ಕೂಡ ಸೀಲ್ಡ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಡ್ರಗ್ಸ್ ಮಾಫಿಯಾದಲ್ಲಿ ಎಷ್ಟೇ ಪ್ರಭಾವಿಗಳು ಇದ್ದರೂ ಶಿಕ್ಷೆ ಖಚಿತ. ಎಷ್ಟು ದೊಡ್ಡವರಾದರು ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ವಿಚಾರದಲ್ಲಿ ಕಾಂಗ್ರೆಸ್ನವರ ಹೇಳಿಕೆ ಅವರ ಪಕ್ಷದಲ್ಲಿನ ತೊಳಲಾಟ ಹಾಗೂ ವಿಫಲತೆ ತೋರಿಸುತ್ತಿದೆ. ನಾಯಕರ ನಡುವೆ ಹಾಗೂ ಪಕ್ಷದಲ್ಲಿ ಸಾಮ್ಯತೆ ಕೊರತೆ ಇದೆ. ಅದನ್ನು ಮರೆಮಾಚಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಸೋಮಣ್ಣ ಕಿಡಿಕಾರಿದರು.