ಹಾಸನ: ರಾಜ್ಯದಲ್ಲಿ ಅನ್ಲಾಕ್ 3.0 ಘೋಷಣೆಯಾಗಿ ವಾರದ ಬಳಿಕ ಜಿಲ್ಲೆಯಲ್ಲಿ ಮೂರನೇ ಹಂತದ ಅನ್ಲಾಕ್ ಇಂದಿನಿಂದ ಜಾರಿಯಾಗಲಿದೆ. ಹಾಗಾಗಿ, ಹಲವು ದಿನಗಳಿಂದ ಮುಚ್ಚಿದ್ದ ಹೋಟೆಲ್, ರೆಸ್ಟೋರೆಂಟ್ಗಳು ಮತ್ತೆ ಬಾಗಿಲು ತೆರೆದಿವೆ.
ನಿನ್ನೆ ಸಂಜೆಯೇ ಹೋಟೆಲ್ಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಿ ಪುನರಾರಂಭಕ್ಕೆ ಸಿದ್ಧಗೊಳಿಸಲಾಗಿತ್ತು. ಹಾಸನ ನಗರದ ಸಂಪಿಗೆ ರಸ್ತೆಯಲ್ಲಿರುವ ಗಜಾನನ ರಿಫ್ರೆಶ್ಮೆಂಟ್, ಎಂ.ಜಿ ರಸ್ತೆಯ ಪಿವಿಆರ್, ಪವಿತ್ರ ಫಾಸ್ಟ್ ಫುಡ್ ಸೇರಿದಂತೆ ಪ್ರಮುಖ ಹೋಟೆಲ್ಗಳು ಇಂದಿನಿಂದ ಓಪನ್ ಆಗಿವೆ.
ಒಂದು ಟೇಬಲ್ಗೆ ಇಬ್ಬರನ್ನು ಮಾತ್ರ ಕೂರಿಸುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಹೋಟೆಲ್ ಮಾಲೀಕರು ಪಾಲಿಸಬೇಕಿದೆ. ಸುಮಾರು 4 ತಿಂಗಳ ಬಳಿಕ ಉದ್ಯಮಕ್ಕೆ ಅವಕಾಶ ಸಿಕ್ಕಿರುವುದು ಹೋಟೆಲ್ ಉದ್ಯಮಿಗಳು ನಿಟ್ಟುಸಿರು ಬಿಡುವಂತಾಗಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಹೋಟೆಲ್ ಮಾಲೀಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಂದಿನಿಂದ ಹೋಟೆಲ್ ತೆರೆಯಲು ಅವಕಾಶ ನೀಡಲಾಗಿದೆ. ನಾವು ಕೂಡ ಸ್ವಚ್ಛತೆ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತೇವೆ. ಈಗಾಗಲೇ ನಮ್ಮ ಸಿಬ್ಬಂದಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಗ್ರಾಹಕರು ಕೂಡ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೋಟೆಲ್ ಮಾಲೀಕ ಪುರುಷೋತ್ತಮ್ ಮನವಿ ಮಾಡಿದ್ದಾರೆ.
ಓದಿ : COVID ನಿಯಮ ಉಲ್ಲಂಘಿಸಿದ ಮೆಟ್ರೋ ಪ್ರಯಾಣಿಕರ ಮೇಲೆ BMRCL ದಂಡ ಪ್ರಯೋಗ
ಮೂರು ತಿಂಗಳಲ್ಲಿ ನಾವು ಅನುಭವಿಸಿದ ಸಂಕಷ್ಟ ಹೇಳತೀರದ್ದಾಗಿದೆ. ಹೋಟೆಲ್ಗೆ ಬರುವ ಗ್ರಾಹಕರು ಮುಂಜಾಗ್ರತೆ ವಹಿಸಿಕೊಂಡು ಓಡಾಡಿದರೆ ಉತ್ತಮ. ಸರ್ಕಾರದ ಕೋವಿಡ್ ನಿಯಮಗಳನ್ನು ಮುಂದಿನ ಆರು ತಿಂಗಳುಗಳ ಕಾಲ ಕಟ್ಟುನಿಟ್ಟಾಗಿ ಪಾಲಿಸಿದರೆ ಮೂರನೇ ಬಾಧಿಸುವುದಿಲ್ಲ. ಆದ್ದರಿಂದ ದಯಮಾಡಿ ಎಲ್ಲರೂ ಮುಂಜಾಗ್ರತೆ ವಹಿಸಿ, ಮೂರನೇ ಅಲೆ ತಡೆಗಟ್ಟಲು ಸಹಕರಿಸಿ ಎಂದು ಪಿವಿಆರ್ ನಳಪಾಕ ಹೋಟೆಲ್ ಮಾಲೀಕ ಹರೀಶ್ ಕೋರಿಕೊಂಡಿದ್ದಾರೆ.
ಎರಡನೇ ಅಲೆ ಕಡಿಮೆಯಾಗುತ್ತಿದೆ ಎಂಬ ಖುಷಿಯಲ್ಲಿ ನಾವು ಮೈಮರೆತರೆ ಮೂರನೇ ಅಲೆ ಬರುವುದು ಖಂಡಿತ. ಹಾಗಾಗಿ, ಪ್ರತಿಯೊಬ್ಬರೂ ಮುಂದಿನ ಆರು ತಿಂಗಳು ಕನಿಷ್ಠ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಬೇಕು ಮತ್ತುಸಾಮಾಜಿಕ ಅಂತ ಕಾಪಾಡಿಕೊಳ್ಳಬೇಕು ಎಂದು ಸ್ಥಳೀಯ ವ್ಯಕ್ತಿ ಫರ್ಮಾನ್ ಖಾನ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಿನ್ನೆ ( ಜುಲೈ 11) ಹೊಸದಾಗಿ 154 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಪಾಸಿಟಿವ್ ರೇಟ್ ಕಡಿಮೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಅನ್ಲಾಕ್ ಮಾಡಲಾಗ್ತಿದೆ.