ಹಾಸನ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ಸಹಾಯಕ ಆರಕ್ಷಕ ಉಪ ನಿರೀಕ್ಷಕರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿದ್ದ ಹಾಸನದ ಗವೇನಗಹಳ್ಳಿಯ ಬಾಲಕೃಷ್ಣ(59) ಮತ್ತು ತಾಲೂಕಿನ ನಿಡುಡಿ ಗ್ರಾಮದ ಅರಕಲಗೂಡು ತಾಲೂಕಿನ ಗೊರೂರು ಪೊಲೀಸ್ ಠಾಣೆಯಲ್ಲಿ ಎಎಸ್ಐಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೊರೆಸ್ವಾಮಿ (58) ಸೋಂಕಿಗೆ ಬಲಿಯಾದ ಇಬ್ಬರು ಪೊಲೀಸರು.
ಕಳೆದ ಎರಡು ತಿಂಗಳ ಹಿಂದೆ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ದೊರೆಸ್ವಾಮಿ ಮತ್ತು ಬಾಲಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಕೆಲಸಕ್ಕೆ ಹಾಜರಾಗಿದ್ದರು. 3 ದಿನದ ಹಿಂದೆ ಮತ್ತೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇಬ್ಬರು, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದೇ ಇಂದು ಇಬ್ಬರು ಮೃತಪಟ್ಟಿದ್ದಾರೆ.
1993 ಸೇವೆಗೆ ಸೇರಿದ್ದ ಇಬ್ಬರು 27 ವರ್ಷದಿಂದ ಪೊಲೀಸ್ ಇಲಾಖೆ ಮೂಲಕ ಜನಸೇವೆ ಮಾಡಿದ್ದರು. ಪೊಲೀಸ್ ಪೇದೆ ಮತ್ತು ಮುಖ್ಯಪೇದೆ ಆಗಿ ಸೇವೆ ಸಲ್ಲಿಸಿದ್ದ ಇವರು ಇತ್ತೀಚೆಗಷ್ಟೇ ಮುಂಬಡ್ತಿ ಪಡೆದು ಸಹಾಯಕ ಆರಕ್ಷಕ ನಿರೀಕ್ಷಕರಾಗಿದ್ದರು.
ಓದಿ: ಮತದಾರನ ಮೇಲೆ ಪಿಎಸ್ಐ ದರ್ಪ: ಆಕ್ರೋಶಗೊಂಡ ಸಾರ್ವಜನಿಕರಿಂದ ಠಾಣೆಗೆ ಮುತ್ತಿಗೆ ಯತ್ನ
ಮುಂಬಡ್ತಿ ಪಡೆದ ಇಬ್ಬರಲ್ಲಿ ದೊರೆಸ್ವಾಮಿ ಅರಕಲಗೂಡು ತಾಲೂಕಿನ ಗೊರೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಬಾಲಕೃಷ್ಣ ಬಡಾವಣೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
ಕೊರೊನಾ ಹೆಮ್ಮಾರಿ ಇಬ್ಬರನ್ನೂ ಬೆಂಬಿಡದೇ ಕಾಡಿದ್ದರಿಂದ ಇಂದು ಇಬ್ಬರೂ ಮೃತಪಟ್ಟಿದ್ದು, ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸಗೌಡ, ಎಸ್ಪಿ ನಂದಿನಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.
ದೊರೆಸ್ವಾಮಿ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ನೀಡುಡಿಯಲ್ಲಿ ಹಾಗೂ ಬಾಲಕೃಷ್ಣ ಅವರ ಅಂತ್ಯಕ್ರಿಯೆ ಸ್ವಗ್ರಾಮ ಗವೆನಹಳ್ಳಿಯಲ್ಲಿ ನೆರವೇರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.