ಹಾಸನ: ರಾಜ್ಯದಲ್ಲಿ ಪ್ರಥಮ ಬಾರಿಗೆ ಸುಸಜ್ಜಿತ ಸಂಚಾರಿ ಪಶು ಚಿಕಿತ್ಸಾ ಆ್ಯಂಬುಲೆನ್ಸ್ ಸಾರ್ವಜನಿಕ ಸೇವೆಗೆ ಸಿದ್ಧವಾಗಿದ್ದು, ಸದ್ಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ.
ಜಾನುವಾರುಗಳಿಗೆ ಪಶು ವೈದ್ಯಕೀಯ ಸೇವೆ ನೀಡಲು 15.58 ಲಕ್ಷ ರೂ. ವೆಚ್ಚದ ಆ್ಯಂಬುಲೆನ್ಸ್ನನ್ನು ಅರಕಲಗೂಡು ಪಶುವೈದ್ಯಕೀಯ ಪಾಲಿಕ್ಲಿನಿಕ್‌ಗೆ ಒದಗಿಸಲಾಗುತ್ತಿದೆ. ಆ್ಯಂಬುಲೆನ್ಸ್‌ನಲ್ಲಿ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಸಲಾಗಿದೆ. 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, 200 ಕೆ.ಜಿ ತೂಕ ಸಾಮರ್ಥ್ಯದ ಶಸ್ತ್ರ, ಚಿಕಿತ್ಸಾ ಟೇಬಲ್, ಎಸಿ ವ್ಯವಸ್ಥೆ, ಪಶುವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನ, ವಾಷ್ ಬೇಸಿನ್, ಮರಣೋತ್ತರ ಪರೀಕ್ಷೆ ಉಪಕರಣ ಕಿಟ್ ಮತ್ತು ಇತರ ಉಪಕರಣ ಇಡಲು ಕಪಾಟು ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಪಶು ಸಂಜೀವಿನಿ ವಾಹನವನ್ನು ಸದ್ಯದಲ್ಲಿಯೇ ಲೋಕಾರ್ಪಣೆ ಮಾಡಲಿದ್ದಾರೆ. 2019–20ನೇ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಿರುವ ಅನುದಾನ ಮತ್ತು ಇತರೆ ಅನುದಾನದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸಾಮಾನ್ಯವಾಗಿ ಜಾನುವಾರುಗಳಿಗೆ ಎದುರಾಗುವ ವಿಷಪ್ರಾಶನ, ಹೊಟ್ಟೆ ಉಬ್ಬರ, ಉಸಿರುಗುಟ್ಟುವುದು, ಅಪಘಾತ, ಮೂಳೆ ಮುರಿತ, ಬೆಬಿಸಿಯೋಸಿಸ್, ಅಂಥ್ರಾಕ್ಸ್, ಚಪ್ಪೆರೋಗ, ಗಳಲೆ ರೋಗ, ಹಾಲು ಜ್ವರ, ಕೆಚ್ಚಲ ಬಾವು ಹಾಗೂ ಸಾಧಾರಣ ಚಿಕಿತ್ಸೆಗೆ ಸ್ಪಂದಿಸದ ಸಮಯದಲ್ಲಿ ಸುಸಜ್ಜಿತ ಸಂಚಾರಿ ಪಶು ಶಸ್ತ್ರಚಿಕಿತ್ಸಾ ವಾಹನಗಳ ಮೂಲಕ ರೈತರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲಾಗುತ್ತದೆ. 1962 ಗೆ ಕರೆ ಮಾಡಿದರೆ ವಾಹನದಲ್ಲಿ ಸ್ಥಳಕ್ಕೆ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ತಕ್ಷಣ ಪಶುವೈದ್ಯಕೀಯ ಸೇವೆ ನೀಡುವುದರಿಂದ ಜಾನುವಾರುಗಳ ಪ್ರಾಣ ಹಾನಿಯನ್ನು ತಡೆಗಟ್ಟಿ, ರೈತರ ಆರ್ಥಿಕ ಹೊರೆ ತಗ್ಗಿಸಬಹುದಾದ ಯೋಜನೆ ಇದಾಗಿದೆ. ಪಶುಪಾಲಕರ ಸಹಾಯವಾಣಿ 1962 ಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಸ್ಥಳಕ್ಕೆ ಬರಲಿದ್ದು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.