ಹಾಸನ: ಅಲ್ಲಿ ಅಪ್ಪಟ ಗ್ರಾಮೀಣ ಸೊಗಡು ಮೈದಳೆದು ನಿಂತಿತ್ತು. ಹುಲ್ಲಿನ ಗುಡಿಸಲಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಗುಂಪುಗಳು. ಇತ್ತ ಮಜ್ಜಿಗೆ ಕಡಿಯುತ್ತಿರುವ ಉಪನ್ಯಾಸಕರು. ಇನ್ನೂ ತರಹೇವಾರಿ ಭೋಜನವನ್ನು ನೀವು ನೋಡಲೇ ಬೇಕು.
ಇದಕ್ಕೆಲ್ಲಾ ಸಾಕ್ಷಿಯಾಗಿದ್ದು, ನಗರದ ಗೃಹ ವಿಜ್ಞಾನ ಕಾಲೇಜು ಆವರಣ. ಸಾಂಸ್ಕೃತಿಕ ಆಹಾರ ಉತ್ಸವ ಹಾಗೂ ಅಜ್ಜಿ ಮನೆ ಅಡಿ ಬರಹದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರು ಪಾಲ್ಗೊಂಡಿದ್ದರು.
ಪಂಚೆ ಧರಿಸಿ, ಹೆಗಲ ಮೇಲೆ ವಸ್ತ್ರ ಹಾಕಿ ಗೌಡರಂತೆ ಯುವಕರು ಮಿಂಚುತ್ತಿದ್ದರೆ. ರೇಷ್ಮೆ ಸೀರೆಯಲ್ಲಿ ಡಾಬು ಕಟ್ಟಿಕೊಂಡು ಹುಡುಗಿಯರು ನಾವೇನು ಕಮ್ಮಿಯಿಲ್ಲ ಎಂಬಂತೆ ಮುನ್ನಗ್ಗುತ್ತಿದ್ದರು. ಇದರ ಜೊತೆಗೆ ವಿಶೇಷ ಬಾಡೂಟದ ಪ್ರದರ್ಶನವು ನಡೆಯಿತು. ರಾಗಿ ಮುದ್ದೆ ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಮಟನ್ ಸಾಂಬಾರ್ ಹೀಗೆ ವಿಶೇಷ ಖಾದ್ಯಗಳ ಮೇಳವೇ ಅಲ್ಲಿ ಸೇರಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್ ವಿವಿಧ ಭೋಜನಗಳ ಪ್ರದರ್ಶನ ವೀಕ್ಷಿಸುತ್ತ, ರುಚಿ ಆನಂದಿಸಿದರು.