ಹಾಸನ : ಮೂರು ವರ್ಷದ ಗಂಡು ಚಿರತೆಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಗೊಲ್ಲರ ಹೊಸಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ಹೆಚ್ಚಾಗಿದ್ದು, ಕಳೆದ ಕೆಲ ದಿನಗಳಿಂದ ಮೂರ್ನಾಲ್ಕು ಜಾನುವಾರಗಳ ಮೇಲೆ ಚಿರತೆ ದಾಳಿ ಮಾಡಿ ಭಯದ ವಾತಾವರಣ ನಿರ್ಮಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜುಲೈ 31ರಂದು ಗ್ರಾಮದಲ್ಲಿ ಚಿರತೆ ಸರೆಗೆ ಬೋನು ಇಟ್ಟಿದ್ದರು. ಇಂದು ಬೆಳಗಿನ ಜಾವ ಬೋನಿನಲ್ಲಿದ್ದ ನಾಯಿಮರಿಯನ್ನು ತಿನ್ನಲು ಬಂದ ವೇಳೆ ಚಿರತೆ ಸೆರೆಯಾಗಿದ್ದು, ಗೊಲ್ಲರ ಹೊಸಹಳ್ಳಿ, ಕುರುವಂಕ, ಬ್ಯಾಡರಹಳ್ಳಿ, ಬಾಗೂರು, ಮುಂತಾದ ಗ್ರಾಮಗಳ ರೈತಾಪಿ ವರ್ಗ ನಿರಾಳವಾಗಿದೆ.
ಶ್ರವಣಬೆಳಗೊಳ ಹಾಗು ಚನ್ನರಾಯಪಟ್ಟಣದ ಸಮೀಪ ಈಗಾಗಲೇ 8ರಿಂದ 10 ಚಿರತೆಗಳಿವೆ ಎಂಬ ಮಾಹಿತಿ ಕಲೆ ಹಾಕಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಜಿನನಾಥಪುರ, ಶ್ರೀಕಂಠ ನಗರ, ದೇವರ ಕೊಪ್ಪಲು ಗ್ರಾಮದ ಸ್ಥಳೀಯರು ಸಂಜೆ ನಾಲ್ಕು ಗಂಟೆಯ ಮೇಲೆ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.
ಚಂದ್ರಗಿರಿಯ ಬೆಟ್ಟದ ಬಂಡೆಗಳ ನಡುವೆ ಇರುವ ಚಿರತೆಗಳನ್ನು ಹೇಗಾದರೂ ಮಾಡಿ ಹಿಡಿದು ಸ್ಥಳಾಂತರಿಸಬೇಕೆಂದು ಈಗಾಗಲೇ ಅರಣ್ಯ ಇಲಾಖೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.