ಹಾಸನ : ಅಪರಿಚಿತರು ರೈಲ್ವೆ ಇಲಾಖೆ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಸಕಲೇಶಪುರ ಸುಬ್ರಹ್ಮಣ್ಯ ರೈಲು ಮಾರ್ಗದ ಕಡಗರವಳ್ಳಿ ಬಳಿ ಜು.16ರ ರಾತ್ರಿ ಇಂಥದ್ದೊಂದು ಘಟನೆ ನಡೆದಿದ್ದು, ರೈಲ್ವೆ ಹಳಿ ರಿಪೇರಿ ಮಾಡುತ್ತಿದ್ದ ಸಿಬ್ಬಂದಿಗೆ ಇಬ್ಬರು ಅಪರಿಚಿತರು ಬಂದೂಕು ತೋರಿಸಿ ಬೆದರಿಸಿದ್ದಾರೆ.
ಆಗಂತುಕರ ಬಳಿ ಪಿಸ್ತೂಲು, ಚೂರಿ ಹಾಗೂ ಇತರ ಆಯುಧಗಳು ಇದ್ದು, ರಾತ್ರಿ 7 ಗಂಟೆ ಸುಮಾರಿಗೆ ಕಾಲುದಾರಿಯಿಂದ ರೈಲ್ವೆ ಟ್ರ್ಯಾಕ್‌ನತ್ತ ಬಂದಿದ್ದರು. ರೈಲ್ವೆ ಸಿಬ್ಬಂದಿ ನೀವು ಯಾರು? ರಾತ್ರಿ ಇಲ್ಲೇನು ಕೆಲಸ ಎಂದು ಪ್ರಶ್ನಿಸಿದ್ದಕ್ಕೆ ಹಿಂದಿಯಲ್ಲಿ ಉತ್ತರ ನೀಡಿದ್ದಾರೆ.
ಭಾಷೆ ಅರ್ಥವಾಗದ್ದರಿಂದ ಸಿಬ್ಬಂದಿ ಕೊಂಚ ಏರು ಧ್ವನಿಯಲ್ಲಿ ಮಾತನಾಡಿದಾಗ, ತಕ್ಷಣ ತಮ್ಮ ಬ್ಯಾಗಿನಿಂದ ಗನ್ ಹಾಗೂ ಚೂರಿ ತೆಗೆದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಆಗಂತುಕರು ರೈಲ್ವೆ ಹಳಿಯಲ್ಲಿಯೇ ಕುಳಿತು ಮದ್ಯ ಸೇವಿಸಿ, ಊಟ ಮಾಡಿ ಕಾಡಿನತ್ತ ತೆರಳಿದರು ಎಂದು ಸಿಬ್ಬಂದಿ, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಡಗರವಳ್ಳಿಗೆ ಭೇಟಿ ನೀಡಿದ ರೈಲ್ವೆ ಪೊಲೀಸರು, ಡಿವೈಎಸ್‌ಪಿ ಶಶಿಧರ್, ಗ್ರಾಮಾಂತರ ಠಾಣೆ ಪಿಎಸ್ಐ ಬ್ಯಾಟರಾಯನಗೌಡ ತಮ್ಮ ಸಿಬ್ಬಂದಿಯೊಂದಿಗೆ 5ಕಿ.ಮೀ. ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇವರ ಚಲನವಲನ ನೋಡಿದ ಸ್ಥಳೀಯರು, ಇವರು ನಕ್ಸಲರು ಆಗಿರಬಹುದು ಎಂದು ಶಂಕಿಸಿದ್ದಾರೆ.