ಹಾಸನ : ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿ ಬೇಕೋ-ಬೇಡವೋ ಎಂಬುದರ ಬಗ್ಗೆ ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರು ಸೇರಿ ಚಿಂತನಾ ಸಭೆ ನಡೆಸಿದರು.
ಡಾ. ಬಾಬು ಜಗಜೀವನ್ ರಾಮ್ ಮಾದಿಗ ಮಹಾಸಭಾ ವೇದಿಕೆಯ ಮುಖಂಡ ಕೃಷ್ಣದಾಸ್ ಮಾತನಾಡಿ, ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ, ಹೊಲೆಯ ಮಾದಿಗರು, ಡಾ.ಬಾಬು ಜಗಜೀವನ್ ರಾಮ್ ಮಾದಿಗ ಮಹಾಸಭಾ, ಅಂಬೇಡ್ಕರ್ ಯುವಕರ ಸಂಘ ಸೇರಿ ಎಲ್ಲಾ ದಲಿತ ಸಂಘದ ಮುಖಂಡರು ಸಭೆಯಲ್ಲಿದ್ದರು. ಮುಖ್ಯವಾಗಿ ಹೊಲೆಯ ಮಾದಿಗರು ಒಂದಾಗಬೇಕು ಎಂಬುದು ಪ್ರಮುಖ ಚರ್ಚೆಯಾಗಿ, ನಂತರ ಜಿಲ್ಲಾ ಮಟ್ಟದಲ್ಲಿ ಒಂದು ಸಭೆ ಮಾಡುವ ಯೋಚನೆ ಇದೆ ಎಂದರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯಾವಾರು ಒಳ ಮೀಸಲಾತಿಗೆ ಸಂಬಂಧಪಟ್ಟ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ಕುಮಾರ್ ಮಿಶ್ರಾರವರನ್ನು ಒಳಗೊಂಡ ಪಂಚ ನ್ಯಾಯಾಧೀಶರ ಪೀಠವು ಸಮಾನತೆ ತರುವುದಕ್ಕಾಗಿ ಎಲ್ಲರೂ ಮೀಸಲಾತಿ ನೀಡಲು ಒಳ ವರ್ಗೀಕರಣವನ್ನು ಮಾಡಲು ಅವಕಾಶ ಮಾಡಲಾಗಿದೆ ಎಂದು ಅಭಿಪ್ರಾಯ ಪಟ್ಟಿರುತ್ತದೆ. ಇದನ್ನು ಮಾದಿಗ ಸಮುದಾಯದ ಒಂದು ಆಶಾಕಿರಣ ಎಂದು ಭಾವಿಸುತ್ತದೆ ಎಂದು ತಿಳಿಸಿದರು.
ಇದರಂತೆ ಆಂಧ್ರದಲ್ಲಿ ಮಾದಿಗ ಸಮುದಾಯದವರು 30 ವರ್ಷ ಹೋರಾಟ ಮಾಡಿದ್ದಕ್ಕೆ ಅಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾದಿಗರಿಗೆ ಒಳಮೀಸಲಾತಿ ಕಲ್ಪಿಸಿದ್ದಾರೆ. ಇಲ್ಲಿ ಕಳೆದ 20 ವರ್ಷಗಳಿಂದ ಕರ್ನಾಟಕದಲ್ಲಿ ಮಾದಿಗ ಸಮುದಾಯದವರು ಒಳಮೀಸಲಾತಿ ವರ್ಗೀಕರಣಕ್ಕೆ ಹೋರಾಟ ಮಾಡಿಕೊಂಡು ಬಂದಿದ್ದು, ಇದರ ಫಲವಾಗಿ ಅಂದಿನ ಸರ್ಕಾರ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ರಚನೆ ಮಾಡಿತ್ತು ಎಂದರು.
ಕಳೆದ 20 ವರ್ಷದ ಹೋರಾಟದಲ್ಲಿ (ಕಾಂಗ್ರೆಸ್,ಬಿಜೆಪಿ, ಜನತಾದಳ) ಪಕ್ಷದ ಮುಖಂಡರು ಹಾಗೂ ಸಂಘಟನೆಗಳಿಂದ ಮಾದಿಗ ಜನಾಂಗಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಾ ಮೀಸಲಾತಿ ವರ್ಗೀಕರಣವನ್ನು ಜಾರಿ ಮಾಡುತ್ತಾರೆಂದು ಹೇಳಿ ಅವರ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ ಈವರೆಗೆ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಆದಷ್ಟು ಬೇಗ ಸಚಿವ ಸಂಪುಟ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟು ಶೋಷಿತ ಜನಾಂಗಕ್ಕೆ ಸೇರಿದ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ ಅವರು, ಇಲ್ಲವಾದ್ರೇ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ತೀರ್ಮಾನಿಸಲಾಯಿತು.
ಸದಾಶಿವ ಆಯೋಗದ ವರದಿ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸುವಂತೆ ಸಭೆಯಲ್ಲಿ ನಿರ್ಣಯ: ನ್ಯಾ. ಸದಾಶಿವ ಆಯೋಗದ ವರದಿಯನ್ನು ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಬೇಕೆಂದು ಹಾಗೂ ಕೂಡಲೇ ಜಾರಿಗೊಳಿಸಬೇಕು ಎಂದು ಹಾಸನ ಜಿಲ್ಲಾ ದಲಿತ ಛಲವಾದಿ–ಮಾದಿಗ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಒಕ್ಕೂರಲಿನ ನಿರ್ಣಯ ಕೈಗೊಳ್ಳಲಾಯಿತು.
ಸೋಮವಾರ ಹಾಸನದ ಅಂಬೇಡ್ಕರ್ ಭವನನದಲ್ಲಿ ಕರೆದಿದ್ದ ವಿವಿಧ ದಲಿತ- ಛಲವಾದಿ- ಮಾದಿಗ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಈ ಸಂಬಂಧ ದಲಿತ ಶಾಸಕರ ಗಮನ ಸೆಳೆಯಲು ಶಾಸಕರ ಮನೆ ಮುಂದೆ ತಮಟೆ ಚಳವಳಿ ಮೂಳಕ ಪ್ರತಿಭಟನೆ ನಡೆಸಲು ತೀರ್ಮಾನಿಲಾಗಿದೆ ಎಂದು ಹಿರಿಯ ದಲಿತ ಮುಖಂಡ ಕೃಷ್ಣಾ ದಾಸ್ ತಿಳಿಸಿದ್ದಾರೆ.
ಇತ್ತೀಚೆಗೆ ಈ ದೇಶದ ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಒಳಮೀಸಲಾತಿ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನ ತಿದ್ದುಪಡಿ ಮಾಡಲು ರಾಜ್ಯ ಮತ್ತು ಕೇಂದ್ರಗಳಿಗೆ ಮುಕ್ತ ಅವಕಾಶ ನೀಡಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಡಾ. ಬಾಬು ಜಗಜೀವನರಾಂ ಮಾದಿಗ ಮಹಾಸಭಾ ವೇದಿಕೆ ಜಿಲ್ಲಾಧ್ಯಕ್ಷ ಶಂಕರ್ ರಾಜ್ ಮಾತನಾಡಿ, ಕಳೆದ 20 ವರ್ಷದಿಂದ ಒಳ ಮೀಸಲಾತಿಗಾಗಿ ಎರಡು ಸಮುದಾಯಗಳು ಹೋರಾಟ ನಡೆಸುತ್ತಾ ಬಂದಿದ್ದು, ಜಾತಿವಾದಿಗಳು ಒಳಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಎರಡು ಸಮುದಾಯಗಳು ಯಾವುದೇ ಆತಂಕ, ಗೊಂದಲಕ್ಕೀಡಾಗದೆ ಏಕತೆ ಪ್ರದರ್ಶಿಸುವ ಮೂಲಕ ಒಗ್ಗಟ್ಟಿನಿಂದ ಚಳವಳಿ ತೀವ್ರಗೊಳಿಸಬೇಕೆಂದು ಹೇಳಿದರು.