ಸಕಲೇಶಪುರ: ಇತ್ತೀಚಿಗೆ ಸುರಿದ ಭಾರೀ ಮಳೆ ಮತ್ತು ಗಾಳಿಯಿಂದಾಗಿ ಕಾಫಿ ಬೆಳೆ ವ್ಯಾಪಕವಾಗಿ ನಾಶವಾಗಿದ್ದು, ಉಂಟಾಗಿರುವ ನಷ್ಟಕ್ಕೆ ಕೂಡಲೇ ಸರ್ಕಾರ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್ ಆಗ್ರಹಿಸಿದ್ದಾರೆ.
ಪಟ್ಟಣದ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಕಾಫಿ ಮಂಡಳಿ ಅಧಿಕಾರಿಗಳು ಹಾಗೂ ಬೆಳೆಗಾರರ ನಡುವಿನ ಸಂವಾದದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೂರು ವರ್ಷಗಳಿಂದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಹಾಮಳೆ ಸುರಿಯುತ್ತಿದ್ದು, ಇದರಿಂದ 40 ಸಾವಿರ ಹೆಕ್ಟೇರ್‌ಗೂ ಹೆಚ್ಚು ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅಪಾರ ನಷ್ಟ ಉಂಟಾಗಿದೆ ಎಂದರು.
ಲಕ್ಷಾಂತರ ಮರಗಳು ಬಿದ್ದಿರುವ ಮಾಹಿತಿ ಇದ್ದು, ಒಂದು ಮರ ಬಿದ್ದರೆ 5 ರೋಬಸ್ಟಾ ಕಾಫಿ ಗಿಡಗಳು ಹಾಗೂ 7 ಅರೇಬಿಕಾ ಗಿಡಗಳಿಗೆ ಹಾನಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಪರಿಶೀಲಿಸಿ ಸರ್ಕಾರ ಸೂಕ್ತ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚಾ.ಅನಂತಸುಬ್ಬರಾಯ ಮಾತನಾಡಿ, ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲೂಕುಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಾಫಿ ಜೊತೆಗೆ ಮೆಣಸು, ಏಲಕ್ಕಿ ಬೆಳೆಗಳಿಗೆ ಹಾನಿಯುಂಟಾಗಿದೆ. ಅದರಲ್ಲೂ ಗಾಳಿ ಹೆಚ್ಚಾಗಿದ್ದರಿಂದ ಮರಗಳು ನೆಲಕ್ಕೆ ಉರುಳಿವೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಲಾಗಿದೆ. ಮಳೆಯಿಂದ ಬಿದ್ದ ಮರಗಳ ಸಾಗಾಣಿಕೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕಾಫಿ ಮಂಡಳಿ ಉಪನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಬೆಳೆಗಾರರು ಸರಿಯಾದ ರೀತಿಯಲ್ಲಿ ತಮಗೆ ಉಂಟಾದ ನಷ್ಟದ ಕುರಿತು ಮಾಹಿತಿ ನೀಡಬೇಕು. ಅದರಿಂದ ಸರ್ಕಾರಕ್ಕೆ ನಿಖರವಾದ ಮಾಹಿತಿ ನೀಡಲು ಸಾಧ್ಯ. ಎನ್ಡಿಆರ್ಎಫ್ ನಿಯಮದಂತೆ ಕಳೆದ ಬಾರಿ ಪರಿಹಾರದ ಹಣ ಬಿಡುಗಡೆ ಮಾಡಲಾಗಿದ್ದು, ಮರ ಬಿದ್ದಿರುವುದಕ್ಕೆ ಪರಿಹಾರ ವ್ಯವಸ್ಥೆ ಇಲ್ಲ. ಆದರೆ, ಇದಕ್ಕೂ ಪರಹಾರ ಒದಗಿಸುವಂತೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿಲಾಗಿದೆ ಎಂದರು.