ಹಾಸನ: ಬ್ರಿಟಿಷರ ಹೆಡೆಮುರಿ ಕಟ್ಟಿದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪಾಠವನ್ನು ಪಠ್ಯದಿಂದ ತೆಗೆದುಹಾಕಿರುವುದನ್ನು ವಿರೋಧಿಸಿ, ಪಠ್ಯದಲ್ಲಿ ಮರುಜೋಡಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ವೀರಶೈವ ಲಿಂಗಾಯತ ಯುವಸೇನೆ ಮನವಿ ಸಲ್ಲಿಸಿತು.
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ನೀಡಿದ ಅನೇಕ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ನಾಡಿಗೆ ಶ್ರೇಷ್ಠ ಕೊಡುಗೆಗಳನ್ನು ನೀಡಿರುವ ಮಹನೀಯರು, ಸಂತರು, ಶರಣರು, ಸಾಹಿತಿಗಳ ಪಾಠವನ್ನು ಪಠ್ಯದಿಂದ ಹೊರಗಿಡಲಾಗಿದೆ. ದೇಶದಲ್ಲಿ ಪರದೇಶಿಗರ ವಿರುದ್ಧ ಹೋರಾಡಿದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಬರುವುದೇ ಕಿತ್ತೂರು ರಾಣಿ ಚೆನ್ನಮ್ಮ. ಆದರೆ, ಇತಿಹಾಸ ಪುಸ್ತಕದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ತಪ್ಪಾಗಿ ದಾಖಲಾಗಿರುವುದು ದುರದೃಷ್ಟಕರ ಎಂದು ಸೇನೆ ಪ್ರತಿಪಾದಿಸಿದೆ.
ಸದ್ಯ ಕೋವಿಡ್ ಹಿನ್ನೆಲೆ ಪಠ್ಯಪುಸ್ತಕದ ಶೇ. 30ರಷ್ಟು ಪಠ್ಯಕ್ರಮ ಮಾತ್ರವೇ ಮಕ್ಕಳಿಗೆ ಅಭ್ಯಸಿಸಲಾಗುತ್ತಿದೆ. ಇದರಲ್ಲಿ ತ್ಯಾಗ ಬಲಿದಾನ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಇತರೆ ಸ್ವಾತಂತ್ರ ಹೋರಾಟಗಾರರ ಕುರಿತ ಪಾಠವನ್ನು ಕೈ ಬಿಡಲಾಗಿದೆ. ಹಾಗಾಗಿ ದಯವಿಟ್ಟು ಇಂತಹ ಪ್ರಮಾದ ಮಾಡದೆ ಅಗತ್ಯ ಇತಿಹಾಸವನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಚಿವರಿಗೆ ಸೇನೆಯು ಮನವಿ ಮಾಡಿದೆ.