ಹಾಸನ: ನಾನು ಉಪ ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಸಮುದಾಯದ ಜನರ ಬಯಕೆ. ನಾನು ಎಲ್ಲೂ ಕೂಡ ಈ ವಿಚಾರವಾಗಿ ಯಾರೊಂದಿಗೂ ಪ್ರಸ್ತಾಪ ಮಾಡಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಹಾಸನದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀರಾಮುಲು, ನನ್ನನ್ನು ಉಪ ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಈ ಬಗ್ಗೆ ನಾನು ವೈಯಕ್ತಿಕವಾಗಿ ಪ್ರಸ್ತಾಪಿಸಿಲ್ಲ. ಸಮುದಾಯದ ಜನರು ಈ ರೀತಿ ಕೇಳುವುದು ಸಹಜ. ಇದರಲ್ಲಿ ನನ್ನದೇನೂ ಪಾತ್ರವಿಲ್ಲ ಎಂದರು. ಮಂತ್ರಿಮಂಡಲ ವಿಸ್ತರಣೆ ಕೂಡ ಆಗುತ್ತದೆ. ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದರು.
ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಪರಿಪಾಠ ಹೊಸದಾಗಿ ಪ್ರಾರಂಭವಾಗಿದೆ. ಇದರಿಂದ ಆಸ್ಪತ್ರೆ ಶುಚಿಯಾಗಿಡಲು ಅಧಿಕಾರಿಗಳು ಪ್ರಯತ್ನಿಸುತ್ತಾರೆಯೇ?. ಜೊತೆಗೆ ವೈದ್ಯರು ಜನರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುತ್ತಾರೆಯೇ? ಜನರಿಗೆ ವೈದ್ಯರ ಸೇವೆ ಸಮರ್ಪಕವಾಗಿದೆಯೇ ಎಂಬುದು ಇದರಿಂದ ತಿಳಿಯಲು ಸಾಧ್ಯವಾಗುತ್ತದೆ ಎಂದರು. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಕ್ಷಮ್ಯ ಅಪರಾಧ. ವೈದ್ಯರ ನೇಮಕಾತಿ ಆದ ನಂತರ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವುದನ್ನು ನಿರ್ಬಂಧಿಸಲಾಗುವುದು ಎಂದರು.