ಸಕಲೇಶಪುರ (ಹಾಸನ): ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಲವು ಅವೈಜ್ಞಾನಿಕ ನೀತಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕವನ್ ಗೌಡ ಆರೋಪಿಸಿದ್ದಾರೆ.
ಇಡೀ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸೇರಿದ ಸಾವಿರಾರು ಕೋಟಿ ಬೆಲೆ ಬಾಳುವ ಜಮೀನುಗಳನ್ನು ಖಾಸಗಿ ಕಂಪನಿಗಳಿಗೆ ಖಾಸಗೀಕರಣದ ಮೂಲಕ ಮಾರಾಟ ಮಾಡುತ್ತಿರುವುದರಿಂದ ರೈತ ಹಾಗೂ ರೈತನಿಗೆ ಸಂಬಂಧಪಟ್ಟ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ನಶಿಸಿ ಹೋಗಿ, ಖಾಸಗಿ ಕಂಪನಿಗಳ ಕೈ ಸೇರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಕಲಂ 79(ಎ) 79 (ಬಿ) ತಿದ್ದುಪಡಿ ಮಾಡಿರುವುದು ರೈತ ವಿರೋಧಿಯಾಗಿದೆ. ಬಹು ದೊಡ್ಡ ಕಂಪನಿಗಳು ರೈತರ ಭೂಮಿಯನ್ನು ಖರೀದಿಸಿ, ಅವರಿಗೆ ಬೇಕಾದ ಅವೈಜ್ಞಾನಿಕವಾದ ಬೆಲೆಯನ್ನು ನಿಗದಿ ಮಾಡಿ ಮುಂದಿನ ದಿನಗಳಲ್ಲಿ ಮಾರಾಟ ಮಾಡುವುದರಿಂದ ನಮ್ಮ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದರು.
ರೈತರು ಸಾಲಗಾರರಾಗಿ ಕಂಪನಿಗಳಿಗೆ ಪೈಪೋಟಿ ನೀಡಲು ಅಸಮರ್ಥರಾಗಿ ತಮ್ಮ ಜಮೀನುಗಳನ್ನು ಅಂತಹ ಬಂಡವಾಳಶಾಹಿ ಕಂಪನಿಗಳಿಗೆ ಮಾರಾಟ ಮಾಡುವಂತಹ ದಿನ ಬರಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಇವೆರಡೂ ಕಾನೂನುಗಳನ್ನು ರೈತ ವಿರೋಧಿ ಎಂದು ಪರಿಗಣಿಸಿ ವಾಪಸ್ ಪಡೆಯುವವರೆಗೂ ಹೋರಾಟ ಮಾಡುವುದಾಗಿ ದೇವೇಗೌಡರ ನೇತೃತ್ವದಲ್ಲಿ ಜೆ.ಡಿ.ಎಸ್. ಪಕ್ಷ ತೀರ್ಮಾನಿಸಿದ್ದು, ಪ್ರತಿಯೊಬ್ಬ ರೈತರು ಹೋರಾಟಕ್ಕೆ ಬೆಂಬಲಿಸಬೇಕೆಂದು ಎಲ್ಲಾ ರೈತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.