ಹಾಸನ: ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ವ್ಯವಹಾರಿಕ ಜ್ಞಾನ ತಿಳಿಯಬೇಕು ಎಂಬ ಉದ್ದೇಶದಿಂದ ವ್ಯಾಪಾರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಚಂದ್ರಶೇಖರ್ ತಿಳಿಸಿದರು.
ಜಿಲ್ಲೆಯ ಬೇಲೂರು ಪಟ್ಟಣದ ವಾರದ ಸಂತೆಯಲ್ಲಿ ನಡೆದ "ವಿದ್ಯಾರ್ಥಿ ಸಂತೆ" ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ವ್ಯವಹಾರಿಕ ಜ್ಞಾನವೂ ಅತಿ ಮುಖ್ಯ. ವಿದ್ಯಾರ್ಥಿ ಸಂತೆಯ ಮೂಲಕ ಮಕ್ಕಳಿಗೆ ಸಂತೆಯಲ್ಲಿ ಹೇಗೆ ವ್ಯಾಪಾರ ಮಾಡುತ್ತಾರೆ ಎಂಬುವುದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರಮುಖವಾಗಿ ಮಾರಾಟ ಮಾಡುವ ಕೌಶಲ್ಯವನ್ನು ಕಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದು ಬಹುತೇಕ ಯುವಕರು ರೈತಾಪಿ ಕಟುಂಬದಿಂದ ಬಂದಿದ್ದರೂ, ತಂತ್ರಜ್ಞಾನದ ಮೊರೆಹೋಗಿ ಹಳ್ಳಿಯ ವ್ಯವಹಾರದ ಜ್ಞಾನವನ್ನು ತಿಳಿದುಕೊಳ್ಳದೇ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸಂತೆ ವ್ಯಾಪಾರ ಮತ್ತು ವಹಿವಾಟಿನ ಪ್ರಾತ್ಯಕ್ಷಿಕೆ ತೋರಿಸಿದರೆ ಅವರ ಮನಸಲ್ಲಿ ಅದು ಮಾಸದಂತೆ ಉಳಿಯುತ್ತದೆ ಎಂದರು.
ವಿದ್ಯಾರ್ಥಿ ಸಂತೆಯಲ್ಲಿ 108 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ತರಕಾರಿ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ಖರೀದಿ ಮತ್ತು ಮಾರಾಟ ಮಾಡಿ ಸುಮಾರು 40 ಸಾವಿರ ರೂ.ಗಳಷ್ಟು ವ್ಯಾಪಾರ ವಹಿವಾಟು ಮಾಡಿದರು. ಶಿಕ್ಷಕರಾದ ದಿವ್ಯಕುಮಾರ್, ಮೋಹನ್ ಕುಮಾರ್, ಸುಕನ್ಯ, ಶಿಲ್ಪಾ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.