ಹಾಸನ: ಲಾಕ್ಡೌನ್ ಘೋಷಣೆಯಾದ ಹಿನ್ನೆಲೆ ದೇಶಾದ್ಯಂತ ಎಲ್ಲಾ ಬಾರ್, ವೈನ್ ಶಾಪ್ಗಳು ಬಾಗಿಲು ಮುಚ್ಚಿವೆ. ಎಣ್ಣೆ ಸಿಗದೇ ನಿದ್ದೆಗೆಟ್ಟಿರುವ ಮದ್ಯ ಪ್ರಿಯರು ಒಂದೇ ತಿಂಗಳಲ್ಲಿ ಒಂದೆ ಮದ್ಯದಂಗಡಿಯಲ್ಲಿ ಎರಡು ಬಾರಿ ಕಳ್ಳತನ ಮಾಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ನಗರದ ಬೆಂಗಳೂರು ರಸ್ತೆಯ ಬೂವನಹಳ್ಳಿ ಕ್ರಾಸ್ ಬಳಿ ಇರುವ ಧನಲಕ್ಷ್ಮಿ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಈ ಏಪ್ರಿಲ್ ತಿಂಗಳಿನಲ್ಲಿಯೇ ಎರಡು ಬಾರಿ ಮದ್ಯ ಕಳ್ಳತನ ಮಾಡಲಾಗಿದೆ. ಮದ್ಯ ಕದಿಯಲು ಬಂದಿರುವ ಮದ್ಯಪ್ರಿಯರು, ಮೊದಲು ಲಿಕ್ಕರ್ಸ್ ಶಾಪ್ ಹಿಂಭಾಗದ ಬಾಗಿಲು ಒಡೆದಿದ್ದು, ಇಲ್ಲಿಂದ ಒಳ ಹೋಗಲು ಸಾಧ್ಯವಾಗದೇ ನಂತರ ಮುಂಬಾಗಿಲು ಕಬ್ಬಿಣದ ಶೆಟರಿನ ಬೀಗವನ್ನು ಕಬ್ಬಿಣದ ರಾಡ್ನಿಂದ ಒಡೆದು ಒಳ ನುಗ್ಗಿ, ಸಾವಿರಾರು ರೂ ಬೆಲೆ ಬಾಳುವ ಮದ್ಯದ ಬಾಟಲ್ಗಳನ್ನು ದೋಚಿದ್ದಾರೆ.
ಬಾಗಿಲು ಒಡೆಯಲು ಉಪಯೋಗಿಸಿದ ಕಬ್ಬಿಣದ ಸಲಾಕೆ ಸ್ಥಳದಲ್ಲಿಯೆ ಕಂಡು ಬಂದಿದೆ. ಲಿಕ್ಕರ್ಸ್ ಶಾಪಿನಲ್ಲಿ ಇದ್ದ ಪೂರ್ಣ ಪ್ರಮಾಣದ ಎಣ್ಣೆಯನ್ನು ಕಳವು ಮಾಡದ ವ್ಯಸನಿಗಳು, ತಮಗೆ ಬೇಕಾದ ಬ್ರಾಂಡನ್ನು ಮಾತ್ರ ಕೊಂಡೊಯ್ದಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿಯೂ ಕೂಡ ಇದೆ ಲಿಕ್ಕರ್ಸ್ ಶಾಪಿನಲ್ಲಿ ಕಳ್ಳತನ ಮಾಡಲಾಗಿದ್ದು, ಈಗ ಮತ್ತೆ ಕಳ್ಳತನವಾಗಿದೆ.
ಈ ಮಧ್ಯೆ ಅಬಕಾರಿ ಅಧಿಕಾರಿಗಳು ಲಾಕ್ಡೌನ್ಗೊಂಡ ಕೆಲ ದಿನಗಳಲ್ಲಿ ಇರುವ ಮದ್ಯದ ಸ್ಟಾಕ್ ಪರಿಶೀಲಿಸಿದ್ದರು. ಕಳ್ಳತನಗೊಂಡ ಮದ್ಯದಂಗಡಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಬೆರಳಚ್ಚುಗಾರರು ಆಗಮಿಸಿ ಮಾಹಿತಿ ಪಡೆದಿದ್ದಾರೆ.