ಹಾಸನ : ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವು ನೀಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಕೂಡಲೇ ಕೇಂದ್ರ ಸರ್ಕಾರದಿಂದ ಮಧ್ಯಂತರವನ್ನು ಬಿಡುಗಡೆ ಮಾಡಿಸಿಕೊಂಡು ಕಾರ್ಯ ಯೋಜನೆ ಘೋಷಣೆ ಮಾಡಿ ಕಾರ್ಯಕ್ರಮ ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದಿಂದ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಎನ್ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು ರಾಜ್ಯದ ಅನೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಜನ ಜಾನುವಾರುಗಳ ಸಾವಿಗೆ ಕಾರಣವಾಗಿದೆ. ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಅನ್ನ ಬೆಳೆಯುವ ಕೈಗಳು ಅನ್ನ ಬೇಡುವ ಸ್ಥಿತಿಗೆ ಬಂದಿದೆ. ಇಂತಹ ಜನರನ್ನು ಸಂಕಷ್ಟವನ್ನು ಸಂತೈಸಿ ಆ ನಷ್ಟವನ್ನು ಭರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಕೂಡಲೇ ಸಮೀಕ್ಷೆ ನಡೆಸಿ ತಾತ್ಕಾಲಿಕ ಪರಿಹಾರ ಕೊಡಬೇಕು. ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ಹೊರತುಪಡಿಸಿ ರೈತರ ಜಮೀನು ದುರಸ್ತಿಕಾರ್ಯ ಚಾಲನೆಯಲ್ಲಿದ್ದು, ಹಾಸನ ಜಿಲ್ಲೆಯಲ್ಲಿ ಮಾತ್ರವೇ ಏಕೆ ಇಲ್ಲ? ದುರಸ್ತಿ ಕಾರ್ಯವನ್ನು ಕೂಡಲೇ ಹಾಸನ ಜಿಲ್ಲೆಯಲ್ಲೂ ಮಾಡುವಂತೆ ಆದೇಶ ನೀಡಬೇಕು ಎಂದು ಒತ್ತಾಯ ಮಾಡಿದರು.