ಹಾಸನ: ಕಾರವಾರ-ಯಶವಂತಪುರ-ಕಾರವಾರ ಸೇರಿದಂತೆ ಬೆಂಗಳೂರು-ಮಂಗಳೂರು ಭಾಗಕ್ಕೆ ಇಂದಿನಿಂದ 4 ರೈಲುಗಳು ಸಂಚಾರ ಆರಂಭಿಸಲಿದ್ದು, ವಿಶೇಷ ರೈಲುಗಳನ್ನು ಪುನಾರಂಭಿಸಲು ನೈಋತ್ಯ ರೈಲ್ವೆ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ.
ಕೊರೊನಾ ಸೋಂಕಿನ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲು ಸಂಚಾರ ಬರೋಬ್ಬರಿ 5 ತಿಂಗಳ ನಂತರ ಹಾಸನ, ಬೆಂಗಳೂರು, ಮಂಗಳೂರು ಮತ್ತು ಕಾರವಾರ ಭಾಗಕ್ಕೆ ರೈಲು ಸಂಚಾರಕ್ಕೆ ಸಜ್ಜಾಗಿವೆ. ರೈಲು ಸಂಖ್ಯೆ 06585 ಯಶವಂತಪುರ-ಕಾರವಾರ ರೈಲು ಪ್ರತಿನಿತ್ಯ ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡಲಿದೆ. ಹಾಗೇ ಮತ್ತೊಂದು ರೈಲು ಮರುದಿನ ಕಾರವಾರದಿಂದ ಸಂಜೆ 6 ಗಂಟೆಗೆ ಹೊರಡಲಿದೆ. ಈ ಹಿಂದೆ ಸಂಚರಿಸುತ್ತಿದ್ದ ರೈಲು ಸಂ. 6595/ 6596ರ ವೇಳಾಪಟ್ಟಿಗಳು ಇದಕ್ಕೆ ಅನ್ವಯವಾಗಲಿವೆ. 06515 ಬೆಂಗಳೂರು ಸಿಟಿ- ಮಂಗಳೂರು, ಮಂಗಳೂರು-ಬೆಂಗಳೂರು ರೈಲುಗಳು ಸಕಲೇಶಪುರ, ಹಾಸನ, ಕುಣಿಗಲ್ ಮಾರ್ಗವಾಗಿ ಸಂಚಾರ ಮಾಡಲಿವೆ.
ಮುಂಗಡ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿನಿತ್ಯ ಬೆಂಗಳೂರು ಸೇರಿದಂತೆ ಸ್ಥಳೀಯ ಭಾಗಕ್ಕೆ ಹೋಗಲು ದಿನನಿತ್ಯದ ಪಾಸ್ ಗೆ ಅವಕಾಶ ನೀಡಿಲ್ಲ. ಪ್ರತಿನಿತ್ಯ ರಾತ್ರಿ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಮುಂಜಾನೆ 4.15ನಿಮಿಷಕ್ಕೆ ಮಂಗಳೂರಿನಿಂದ ಹಾಸನಕ್ಕೆ ರೈಲು ಬರಲಿದ್ದು, 7ಗಂಟೆಗೆ ಬೆಂಗಳೂರು ತಲುಪಲಿದೆ. ಹಾಗೇ ಬೆಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಡಲಿರುವ ರೈಲು ರಾತ್ರಿ 10.20ಕ್ಕೆ ಹಾಸನ ಬಂದು ತಲುಪಲಿದ್ದು, ಕುಣಿಗಲ್, ಯಡಿಯೂರು, ಶ್ರವಣಬೆಳಗೊಳ, ಚನ್ನರಾಯಟ್ಟಣ, ಸಕಲೇಶಪುರ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಮೊದಲಿನಂತೆಯೇ ನಿಲುಗಡೆ ಇರಲಿದೆ.
ಸಾಮಾಜಿಕ ಅಂತರ ಕಾಪಾಡುವಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಪ್ರತಿ ರೈಲಿನಲ್ಲಿಯೂ ಸ್ಯಾನಿಟೈಸರ್ ನೀಡಲಾಗುತ್ತಿದೆ. ಅಲ್ಲದೆ ಪ್ರತಿ ಬೋಗಿಯಲ್ಲಿ 40 ರಿಂದ 45 ಮಂದಿಯಂತೆ ಮುಂಗಡ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಆದೇಶ ಬರುವ ತನಕ ರಾತ್ರಿ ಮಾತ್ರ ಪ್ರಾಯೋಗಿಕ ರೈಲು ಸಂಚಾರ ನಡೆಯಲಿದ್ದು, ಸಂಪೂರ್ಣ ಅನ್ಲಾಕ್ ಆದ ಬಳಿಕ ಬೆಳಗಿನ ಸಮಯದಲ್ಲಿ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು.