ಹಾಸನ: ಸಚಿವ ಸಂಪುಟದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದ್ದು, ಮೊದಲು ಗೆದ್ದು ಬಂದಿರುವ ಶಾಸಕರುಗಳಿಗೆ ಅವಕಾಶ ಮಾಡಿಕೊಟ್ಟು ನಂತರ ಸೋತವರಿಗೂ ಅವಕಾಶ ಮಾಡಿಕೊಡುತ್ತಾರೆ ಎನ್ನುವ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಸೋತವರಿಗೆ ಸದ್ಯಕ್ಕೆ ಯಾವುದೇ ಸ್ಥಾನ ಇಲ್ಲ ಅಂತ ಪರೋಕ್ಷವಾಗಿ ಹೇಳಿದ್ದಾರೆ.
ತುಮಕೂರಿನಿಂದ ಹಾಸನ ಮಾರ್ಗವಾಗಿ ಹಳೇಬೀಡು ಹೋಗುವ ಮಾರ್ಗಮಧ್ಯೆ ಮಾತನಾಡಿದ ಶ್ರೀರಾಮುಲು, ಸಚಿವ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಗಳ ಕೈಸೇರಲಿದ್ದು, ಇಲ್ಲಿಯ ತನಕ ಯಾವುದೇ ಮಾಹಿತಿ ಬಂದಿಲ್ಲ. ಸೋತವರಿಗೂ ಅವಕಾಶ ನೀಡುವ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು. ಮೂಲ ಬಿಜೆಪಿ ಮತ್ತು ವಲಸೆ ಬಿಜೆಪಿಯವರಿಗೆ ಮಂತ್ರಿ ಸ್ಥಾನವನ್ನ ಕೊಡುವ ವಿಚಾರವನ್ನ ಹೈಕಮಾಂಡ್ ನಿರ್ಧಾರ ಮಾಡಿದ್ದು, ಮೊದಲು ಗೆದ್ದು ಬಂದಿರುವ ಶಾಸಕರುಗಳಿಗೆ ಅವಕಾಶ ಮಾಡಿಕೊಟ್ಟು ನಂತ್ರ ಸೋತವರಿಗೂ ಅವಕಾಶ ಮಾಡಿ ಕೊಡುತ್ತಾರೆ.
ತಮಗೆ ಡಿಸಿಎಂ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ 3 ಡಿಸಿಎಂ ಗಳಿದ್ದು, ಅಂತಹದರಲ್ಲಿ ನಾಲ್ಕನೇ ಡಿಸಿಎಂ ಬೇಡ ಎನ್ನುವುದು ನಮ್ಮ ಮುಖ್ಯಮಂತ್ರಿ ಆಶಯ. ಹಾಗಾಗಿ ಸಮಯ ಬರುವ ತನಕ ಕಾಯಬೇಕಾಗುತ್ತೆ. ರಾಜ್ಯದಲ್ಲಿ ರಾಜ್ಯದಲ್ಲಿ ಒಟ್ಟು 47 ಕೊರೊನಾ ಶಂಕಿತರ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, ಅದೆಲ್ಲವೂ ನೆಗೆಟಿವ್ ಆಗಿ ಬಂದಿರುವುದರಿಂದ ಚಿಂತೆಯಿಲ್ಲ. ತುಮಕೂರಿನಲ್ಲಿ ಓರ್ವ ಹೆಣ್ಣು ಮಗಳ ಮೇಲೆ ಶಂಕೆಯಿದೆ. ಅವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಕೇರಳ ಮತ್ತು ಮಡಿಕೇರಿ ಗಡಿಭಾಗದಲ್ಲಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ತೊಂದರೆಯಿಲ್ಲ ಎಂದರು.
ಕೋಡಿಮಠದ ಶ್ರೀಗಳು ನುಡಿದಿರುವ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ ಅವರು, ಕೆಲವೊಂದು ವಿಷಯದಲ್ಲಿ ಅವರು ನುಡಿದಿರುವ ಭವಿಷ್ಯ ನಿಜವಾಗಿದೆ. ಆದ್ರೆ ಅವರು ಹೇಳಿರುವ ರಾಜಕೀಯ ಭವಿಷ್ಯವು ಯುಗಾದಿ ನಂತ್ರ ಏನಾಗುತ್ತೆ ಅನ್ನೋದನ್ನ ಕಾದು ನೋಡೋಣ ಎಂದು ಹೇಳಿದರು.