ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಕಾಗನೂರು ಗ್ರಾಮದ ಹೇಮಾವತಿ ನದಿ ತೀರದ ಪಾದಾರೆಕಲ್ಲು ಎಂಬಲ್ಲಿ ಶ್ರೀರಾಮ ಸಂಚರಿಸಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಪಾದುಕೆಗಳು ಗೋಚರವಾಗಿವೆ. ಶ್ರೀರಾಮನ ಕುರುಹುಗಳ ನೋಡಲು ಸಾರ್ವಜನಿಕರು ತಂಡೋಪತಂಡವಾಗಿ ಬಂದು ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆಯುತ್ತಿದ್ದಾರೆ. ಪಾದುಕೆಗಳು ಕಂಡುಬಂದಿರುವ ಈ ಬಂಡೆಯನ್ನು ಹೇಮಾವತಿ ಹಿನ್ನೀರು ಆವರಿಸುವುದರಿಂದ ಸಂಪೂರ್ಣ ಮುಚ್ಚಿ ಹೋಗುತ್ತದೆ. ಆದರೆ, ಇದೇ ಮೊದಲ ಬಾರಿಗೆ ಕಂಡುಬಂದ ಪ್ರಾಚೀನ ಕಾಲದ ಕುರುಹುಗಳನ್ನು ಜನರು ಕಂಡು ಅಚ್ಚರಿಗೊಂಡಿದ್ದಾರೆ.
ಕಾಗನೂರು ಗ್ರಾಮದಲ್ಲಿರುವ ಆಂಜನೇಯ ದೇವರಿಗೆ ಪ್ರತಿ ವರ್ಷ ಕುಂಭ ಸ್ನಾನ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಹಣ್ಣು, ತುಪ್ಪ, ರಸಾಯನ, ಪಂಚಕಜ್ಜಾಯ ನೈವೇದ್ಯ, ಮಹಾಮಂಗಳಾರತಿ ನೆರವೇರಿಸುವುದು ವಾಡಿಕೆ. ಈ ಆಂಜನೇಯ ದೇವಾಲಯದಿಂದ ಅರ್ಧ ಕಿ.ಮೀ ದೂರದಲ್ಲಿರುವ ಹೇಮಾವತಿ ನದಿ ತೀರದಲ್ಲಿ ಪಾದಾರೆಕಲ್ಲು ಎಂಬಲ್ಲಿ ಪೂಜೆ ಸಲ್ಲಿಸಲಾಗಿದೆ. ಇಲ್ಲಿ ಈಶ್ವರ ಲಿಂಗ, ಜೊತೆಯಾಗಿರುವ ಎರಡು ಪಾದಗಳು, ಮಸುಕಾಗಿ ಕಾಣುವ ಮತ್ತೊಂದು ದೊಡ್ಡ ಪಾದ, ತ್ರಿಕೋನಾಕೃತಿಯ ಪಗಡೆಹಾಸಿನಂತಹ ಆಕೃತಿ ಒಂದೇ ಬಂಡೆಯ ಮೇಲೆ ಮೂಡಿದೆ.
ಶ್ರೀರಾಮ ಲಂಕಾಧೀಶ ರಾವಣನ ಸಂಹಾರದ ನಂತರ ಬ್ರಹ್ಮಹತ್ಯಾ ದೋಷ ಪರಿಹಾರಕ್ಕಾಗಿ ಲೋಕಸಂಚಾರ ಕೈಗೊಂಡಿದ್ದಾಗ ಗ್ರಾಮಕ್ಕೆ ಬಂದಿದ್ದಾಗ ಇಲ್ಲಿ ಶಿವಲಿಂಗ ಮೂರ್ತಿ ಸೃಷ್ಟಿಸಿದ್ದ ಎಂಬುದನ್ನು ಪುರಾಣ ಕಥೆಗಳು ಹೇಳುತ್ತವೆ. ಆಂಜನೇಯ ಶ್ರೀರಾಮರನನ್ನು ಹೊತ್ತೊಯ್ದಿರುವ ಕುರುಹಾಗಿರುವ ದೊಡ್ಡ ಪಾದ ಆಂಜನೇಯನದ್ದು. ಆಟದ ವಿಚಾರ ಪಗಡೆ ಹಾಸಿನಿಂದ ತಿಳಿಯುತ್ತದೆ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಉರುಸ್ ಆಚರಣೆ