ಹಾಸನ: ಅಪ್ಪ ದುಡ್ಡು ಕೊಟ್ಟಿಲ್ಲ ಎಂದು ತಂದೆಯ 13,20,000 ರೂಪಾಯಿ ಹಣವನ್ನು ಮಗನೇ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ದೊಡ್ಡ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ. ಯಗಚಿನಾಲೆ ಕಾಮಗಾರಿಗೆ ಹಾಸನ ತಾಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದ ರಂಗಸ್ವಾಮಿ ಅವರ 14 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆ ರಂಗಸ್ವಾಮಿಗೆ ಸರ್ಕಾರದಿಂದ 13,20,000 ರೂ. ಹಣವನ್ನು ಪರಿಹಾರವಾಗಿ ನೀಡಲಾಗಿತ್ತು. ಅದಕ್ಕೆ ರಂಗಸ್ವಾಮಿ ತಮ್ಮ ಮೂವರು ಮಕ್ಕಳಿಗೆ ಹಣ ಹಂಚಲು ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಮನೆಯಲ್ಲಿಟ್ಟಿದ್ದರು.
ಎಪ್ರಿಲ್ 23 ರಂದು ರಂಗಸ್ವಾಮಿ ಮನೆಗೆ ಬೀಗ ಹಾಕಿಕೊಂಡು ದನಗಳನ್ನು ಮೇಯಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಕಳ್ಳತನ ನಡೆದಿತ್ತು. ಪರಿಣಾಮ ರಂಗಸ್ವಾಮಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಪ್ರಕರಣ ಭೇದಿಸಲು ಮುಂದಾಗಿದ್ದರು. ಈ ವೇಳೆ ಕಳ್ಳನ ಸುಳಿವು ಸಿಕ್ಕಿದ್ದು, ದೊಡ್ಡ ಆಲದಹಳ್ಳಿ ಗ್ರಾಮದ ರಂಗನಾಥ ಹಣ ಕಳ್ಳತನ ಮಾಡಿರುವುದಾಗಿ ಪೊಲೀಸರು ರಂಗಸ್ವಾಮಿಗೆ ತಿಳಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬೇರೆ ಯಾರೂ ಅಲ್ಲ, ರಂಗಸ್ವಾಮಿಯ ಹಿರಿಯ ಮಗನೇ ಆಗಿದ್ದಾನೆ. ಪ್ರಸ್ತುತ ಪೊಲೀಸರು ಬಂಧಿತನಿಂದ 13,20,000 ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ರಂಗನಾಥನನ್ನು ಪೊಲೀಸರು ವಿಚಾರಣೆ ಮಾಡಿದ್ದು, ಜಮೀನು ಹಂಚಿಕೆಯಲ್ಲಿ ನನಗೆ ಮೋಸವಾಗಿದೆ. ಎಲ್ಲ ಹಣ ನನಗೆ ಸೇರಬೇಕು ಹಾಗೂ ತನಗೆ ಹಣ ನೀಡಲ್ಲ ಎಂದು ಭಾವಿಸಿ ಮನೆಯಲ್ಲಿಟ್ಟಿದ್ದ ದುಡ್ಡನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಳ್ಳತನದ ಆರೋಪ: ವಾಚ್ಮ್ಯಾನ್ಗೆ ತಲೆಕೆಳಗಾಗಿ ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು