ಬೇಲೂರು (ಹಾಸನ): ತೋಟದಲ್ಲಿ ಅಡಕೆ ಗಿಡಗಳನ್ನು ಬೆಳೆದು ಭವಿಷ್ಯದಲ್ಲಿ ಉತ್ತಮ ಫಸಲಿನ ನಿರೀಕ್ಷೆ ಹೊಂದಿದ್ದ ರೈತನಿಗೆ ಶಾಕ್ ಆಗಿದೆ. ಯಾರೋ ಕಿಡಿಗೇಡಿಗಳು ವ್ಯಕ್ತಿಯೊಬ್ಬರಿಗೆ ಸೇರಿದ ಅಡಕೆ ಗಿಡಗಳನ್ನು ಕತ್ತರಿಸಿ ಹಾಕಿ ದುಷ್ಕೃತ್ಯ ಮೆರೆದಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಶಂಭುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಂಭುಗನಹಳ್ಳಿ ಗ್ರಾಮದ ರೈತ ಸಂತೋಷ್ ಅವರು ಕಳೆದ ಎರಡು ವರ್ಷಗಳಿಂದ ಬಹಳ ಶ್ರಮ ವಹಿಸಿ ಅಡಕೆ ಗಿಡ ಬೆಳೆಸಿದ್ದರು. ಎಲ್ಲ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರು. ಆದರೆ, ಕಳೆದ ರಾತ್ರಿ ಸುಮಾರು 170ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಮಾಡಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿ ಅಂದರ್
ಶಂಭುಗನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ 138 ರಲ್ಲಿ 2.17 ಎಕರೆ ಭೂಮಿಯನ್ನು ಕಳೆದ ಐದು ವರ್ಷಗಳ ಹಿಂದೆ ಖರೀದಿಸಿ ಕೊಳವೆಬಾಯಿ ತೆಗೆಸಿ ಅಡಕೆ ಗಿಡಗಳನ್ನು ಹಾಕಲಾಗಿತ್ತು. ಅಡಕೆ ಗಿಡಗಳನ್ನು ನೆಟ್ಟು ಒಂದೂವರೆ ವರ್ಷ ಕಳೆದಿದೆ. ನಾವು ಬೇಲೂರು ಪಟ್ಟಣದಲ್ಲಿ ಒಂದು ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಮಕ್ಕಳಂತೆ ಬೆಳೆಸಿದ್ದ ಅಡಕೆ ಗಿಡಗಳನ್ನು ಯಾರೋ ಏಕಾಏಕಿ ಕತ್ತರಿಸಿ ವಿಕೃತಿ ಮೆರೆದಿದ್ದಾರೆ ಎಂದು ರೈತ ಕಿಡಿಕಾರಿದರು.
ಅಲ್ಲದೇ ಪ್ರತಿ ಹನಿ ನೀರಾವರಿ ಪೈಪ್ಗಳನ್ನು ಮನಬಂದಂತೆ ತುಳಿದು ಹಾಳು ಮಾಡಿದ್ದಾರೆ. ಈ ಕೃತ್ಯದಿಂದ ತೀವ್ರ ನೋವಾಗಿದೆ ಎಂದು ರೈತ ಸಂತೋಷ್ ಕಣ್ಣೀರಿಟ್ಟಿದ್ದಾರೆ.