ಹಾಸನ: ಹೃದಯಾಘಾತದಿಂದ ಸಾವನ್ನಪ್ಪಿದ ಕರುನಾಡಿನ ಯೋಧ ಬಿ.ಟಿ. ಮಂಜೇಗೌಡರ (55) ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಬಿ.ಟಿ. ಮಂಜೇಗೌಡ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗದ್ದೇಬಿಂಡೆನಹಳ್ಳಿ ಗ್ರಾಮದವರಾಗಿದ್ದು,1988ರಲ್ಲಿ ಸಿಆರ್ಸಿಎಫ್ ಸೇರುವ ಮೂಲಕ ದೇಶ ಸೇವೆ ಆರಂಭಿಸಿದರು. ಜಮ್ಮು- ಕಾಶ್ಮೀರ, ಛತ್ತೀಸ್ಗಡ್, ಅಸ್ಸಾಂ ,ತ್ರಿಪುರ ಮಿಜೋರಾಮ್ ಸೇರಿದಂತೆ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಇವರು ಇತ್ತೀಚೆಗಷ್ಟೇ ಹೈದರಾಬಾದ್ನಲ್ಲಿ ಎಎಸ್ಐ ಹುದ್ದೆಗೆ ಬಡ್ತಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದರು.
ಮಂಜೇಗೌಡರು ಕಳೆದ ಒಂದು ವಾರದ ಹಿಂದೆ ಹೃದಯ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದೆ ನ.12ರಂದು ಸಾವನ್ನಪ್ಪಿದ್ದು, ಮೃತದೇಹವನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತಂದು ಬಳಿಕ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ತರಲಾಯಿತು.
ಮೃತ ಯೋಧನ ಪಾರ್ಥಿವ ಶರೀರವನ್ನು ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಬಳಿಕ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸುವ ಮೂಲಕ ಯೋಧನಿಗೆ ಅಂತಿಮ ನಮನವನ್ನು ಸಲ್ಲಿಸಲಾಯಿತು. ಒಕ್ಕಲಿಗ ಸಮುದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿತು.