ಸಕಲೇಶಪುರ : ಹಲಸಿನ ಹಣ್ಣಿನಲ್ಲಿ ವಿಷ ಹಾಕಿ ಹಸುಗಳಿಗೆ ತಿನ್ನಿಸಿ ಕೊಂದಿರುವ ಅಮಾನವೀಯ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕುನಿಗನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹೆಗ್ಗಾವೆ ಗ್ರಾಮದಲ್ಲಿ ಎಂದಿನಂತೆ ಗ್ರಾಮಸ್ಥರು ದನಗಳನ್ನು ಮೇಯಿಸಲು ಸೋಮವಾರ ಬೆಳಗ್ಗೆ ಹೊರಕ್ಕೆ ಬಿಟ್ಟಿದ್ದರು. ಸಂಜೆಯಾದರೂ ಅವು ಮನೆಗೆ ಬಾರದ ಹಿನ್ನೆಲೆ ಏನೋ ಅನಾಹುತವಾಗಿರಬಹುದು ಎಂದು ಹುಡುಕಲು ಹೋದವರಿಗೆ ಉಬ್ಬರಿಸಿಕೊಂಡು ಸತ್ತು ಬಿದ್ದಿದ್ದ ಎರಡು ಗೋವುಗಳು ಕಾಣಿಸಿದೆ.
ಅಲ್ಲೆ ಕಾಫಿ ತೋಟದಲ್ಲಿ ಗೋವುಗಳು ತಿಂದಿದ್ದ ಹಲಸಿನ ಹಣ್ಣುಗಳು ಕಾಣಿಸಿದ್ದವರು. ಇದಾದ ನಂತರ ಮರಳಿ ಬಂದಿದ್ದ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದವರಿಗೂ ಶಾಕ್ ಕಾದಿತ್ತು. ಕಟ್ಟಿದ ಜಾಗದಲ್ಲೇ ಅವು ರಕ್ತ ಕಾರಿಕೊಂಡು ಪ್ರಾಣ ಬಿಟ್ಟಿದ್ದವು.
ನಂಜಪ್ಪ, ಸುರೇಶ್, ಸುದೀಶ್ ಎಂಬುವರ 6 ಹಸುಗಳು ಸಾವನ್ನಪ್ಪಿವೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರತಾಪ್ ಎಂಬುವರು ಹಸುಗಳಿಗೆ ವಿಷವಿಟ್ಟಿದ್ದಾರೆ ಎಂದು ಹಸುಗಳ ಮಾಲೀಕರು ದೂರು ದಾಖಲಿಸಿದ್ದಾರೆ.