ಹಾಸನ: ನಾನು ಯಾವ ಕಾರ್ಯಕರ್ತರನ್ನು ಕಡೆಗಣಿಸಿಲ್ಲ. ನನ್ನ ಪಾಡಿಗೆ ನಾನು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿಕೊಂಡು ಹೋಗ್ತಾ ಇದ್ದೇನೆ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ತಿಳಿಸುತ್ತೇನೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಎಲ್ಲಾ ಪಕ್ಷದಲ್ಲೂ ಇದು ಸರ್ವೇಸಾಮಾನ್ಯ. ಭಿನ್ನಾಬಿಪ್ರಾಯವನ್ನು ಬಗೆಹರಿಸಲು ರೇವಣ್ಣ ಮತ್ತು ಕುಮಾರಸ್ವಾಮಿ ನನ್ನೊಂದಿಗೆ ಮಾತುಕತೆ ಮಾಡಿದ್ದಾರೆ. ನಾನು ಕೂಡ ಅವರ ಜೊತೆಯಲ್ಲೇ ಮಾತುಕತೆ ಮಾಡಿದ್ದೇನೆ. ಶೂನ್ಯ ಮಾಸ ಹಾಗಾಗಿ ನಾನು ಈಗ ಏನನ್ನು ಮಾತನಾಡುವುದಿಲ್ಲ. ಶೂನ್ಯ ಮಾಸ ಕಳೆದ ಬಳಿಕ ನನ್ನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು ಮತ್ತು ಮುಖಂಡರುಗಳನ್ನು ಕರೆದು ಬೃಹತ್ ಸಭೆಯಲ್ಲಿ ಮಾತುಕತೆ ನಡೆಸುತ್ತೇನೆ ಎಂದರು.
ಯಾವ ವಿಷಯಕ್ಕಾಗಿ ಭಿನ್ನಾಬಿಪ್ರಾಯ ಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಈ ಬಗ್ಗೆ ಎಲ್ಲಾರಿಗೂ ಗೊತ್ತೇ ಇದೆ. ಅದರ ಬಗ್ಗೆ ಮತ್ತೆ ಪ್ರಸ್ತಾಪ ಮಾಡುವುದು ಬೇಡ. ಸಮಯ ಬಂದಾಗ ಹೇಳುವೆ ಎಂದರು.
ಇನ್ನು ಮಾಜಿ ಸಚಿವ ಹೆಚ್ ಡಿ ರೇವಣ್ಣರಿಗೆ ಜ.15ರೊಳಗೆ ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸುವಂತೆ ಕಾರ್ಯಕರ್ತರು ಬಿಗಿ ಪಟ್ಟು ಹಿಡಿದಿದ್ದಾರೆ. ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿ ಎಂದು ಪಟ್ಟು ಹಿಡಿದ ಕಾರ್ಯಕರ್ತರಿಗೆ ಹೆಚ್.ಡಿ. ರೇವಣ್ಣ ಸಮಾಧಾನ ಮಾಡಿ, ಜ. 15ರೊಳಗೆ ತೀರ್ಮಾನ ಹೇಳಿ ಎಂದು ಪಕ್ಷಕ್ಕೆ ಹೇಳಿರುವ ಮಾತು ಮಾಧ್ಯಮದಲ್ಲಿ ನೋಡಿದೆ. ಹಾಗಾಗಿ ಶೂನ್ಯ ಮಾಸ ಮುಗಿದ ಕೂಡಲೇ ನಿರ್ಧಾರ ಮಾಡುತ್ತೇನೆ ಎಂದು ಶಿವಲಿಂಗೇಗೌಡರು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಬರೀ ಬೂಟಾಟಿಕೆ ಪಾರ್ಟಿ ಬಿಜೆಪಿ: ಸುಳ್ಳುಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕರ್ಮ ನಿಮಗೇಕೆ ಬಂತು ಶಾ ಜೀ.. ಹೆಚ್ಡಿಕೆ