ಹಾಸನ: ಕನಸು ಮನಸಲ್ಲೂ ಸೇನೆ ಸೇರುತ್ತೇನೆ ಎಂದು ತಿಳಿದಿರದ ಯೋಧರೊಬ್ಬರು ಈಗ ರೋಲ್ ಮಾಡಲ್ ಆಗಿದ್ದಾರೆ. ಅವರೇ ಮಾಜಿ ಯೋಧ ಲೂಯಿಸ್ ಪೆರಿಯಾ ನಾಯಗನ್.
ಸದ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಇವರನ್ನ ಕರೆಯೋದು ಮಾತ್ರ ಟೈಗರ್ ಎಂದು. ಆ ಟೈಗರ್ ಈಗ ಹಾಸನದ ಎನ್ಸಿಸಿ ವಿದ್ಯಾರ್ಥಿಗಳಿಗೆ ತರಬೇತುದಾರರಾಗಿ ಮತ್ತು ಜೂನಿಯರ್ ಕಮಿಷನ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂಲತಹಃ ಚಾಮರಾಜ ನಗರ ಜಿಲ್ಲೆಯ ಸಂಗನ ಪಾಳ್ಯ ಗ್ರಾಮದವರಾದ ಇವರು ತುಂಬಾ ಹತ್ತಿರದಿಂದ ಸೈನಿಕರನ್ನು ನೋಡಿ ಬೆಳೆದ ವ್ಯಕ್ತಿ. ವೀರಪ್ಪನ್ ಕಾರ್ಯಾಚರಣೆಯಲ್ಲಿ ತನ್ನ ಗ್ರಾಮಕ್ಕೆ ಹತ್ತಿರವಾಗಿ ಅರೆಸೇನಾ ತುಕಡಿ ಕೆಲಸ ಮಾಡುತ್ತಿದ್ದುದನ್ನು ನೋಡಿ ಬೆಳೆದಂತಹ ಲೂಯಿಸ್ ಇಂತಹ ದೇಶ ಸೇವೆಯನ್ನು ನಾನು ಮಾಡಬೇಕು ಎಂದು ಅಂದುಕೊಂಡು ಪಟ್ಟುಬಿಡದೆ ಸೇನೆ ಸೇರಿದರು.
ಚಿಕ್ಕವಯಸ್ಸಿನಲ್ಲಿಯೇ ಸೈನ್ಯ ಸೇರಬೇಕೆಂದು ಮಾಜಿ ಯೋಧ ಲೂಯಿಸ್ ಅಂದುಕೊಂಡಿದ್ದರು. ಅದರಂತೆ ಸೇನೆಗೆ ಸೇರಿ ಡಿಸೆಂಬರ್ 26, 1996 ರಂದು ಜಮ್ಮು-ಕಾಶ್ಮೀರಕ್ಕೆ ಹೋದರು. ಮೊದಲ ದಿನವೇ ಅವರು ಏನೆಂಬುದನ್ನು ಅಲ್ಲಿನ ಸೈನಿಕರಿಗೆ ತೋರಿಸಿಕೊಟ್ಟಿದ್ದರು. ಹೊರಟ ದಿನವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮೆರೆದಿದ್ದು, ವಾಹನದಲ್ಲಿ ಹೋಗುವಾಗಲೇ ಉಗ್ರರು ಫೈರಿಂಗ್ ಮಾಡಿದರು.
ತನ್ನ ಹಿರಿಯ ಅಧಿಕಾರಿಗಳ ಜೊತೆ ಅಲ್ಲಿಯೇ ಉಳಿದು ಕಾರ್ಯಾಚರಣೆಯಲ್ಲಿ ಭಾಗಿಯಾದ ಲೂಹೀಸ್ ಅವರ ಧೈರ್ಯ ಮೆಚ್ಚಬೇಕಾದದ್ದು. ಕಾರಣ ತರಬೇತಿ ಪಡೆಯುವ ಮುನ್ನವೇ ಉಗ್ರರ ಜೊತೆ ಹೋರಾಡಲು ಅವಕಾಶ ಸಿಕ್ಕಿತ್ತು. ಇದು ನಿಜಕ್ಕೂ ಹೆಮ್ಮೆಯ ವಿಚಾರ ಅನ್ನುತ್ತಾರೆ ಲೂಯಿಸ್.
ಇದರ ಜೊತೆಗೆ ಪ್ರಮುಖ ಉಗ್ರ ನೆಲೆಗಳ ಮೇಲೆ ದಾಳಿ, ಬಾರ್ಡರ್ ಗಸ್ತು ಸೇರಿದಂತೆ ಹಲವು ವಿಭಾಗದಲ್ಲಿ ಮಾಜಿ ಯೋಧ ಲೂಯಿಸ್ ಕೆಲಸ ಮಾಡಿದ್ದಾರೆ. ಇದಲ್ಲದೆ 2008 ಡಿಸೆಂಬರ್ 18ರಲ್ಲಿ ಕಾಶ್ಮೀರದ ತೋಡಾ ಎಂಬ ಗಡಿ ಭಾಗದ ರೋಚಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾರ್ಯಾಚರಣೆಯ ಮಧ್ಯೆ ವಿರಾಮಕ್ಕೇಂದು ಹೋಗಿದ್ದ ಲೂಹಿಸ್ ಟೀಂ ಮೇಲೆ ಮೂರು ಮಂದಿ ಉಗ್ರರು ದಾಳಿ ನಡೆಸಿದ್ದರು. ಆದರೆ ಎದೆಗುಂದದ ಲೂಯಿಸ್ ತಂಡ ಉಗ್ರರ ವಿರುದ್ಧ ಎದೆಯೊಡ್ಡಿ ಉಗ್ರರನ್ನ ಧಮನ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಪಾಕಿಸ್ತಾನದ ಗಡಿ ಭಾಗದಲ್ಲಿಯೇ ಉಗ್ರರನ್ನು ಹೊಡೆದುರುಳಿಸಿದ ಪರಿಣಾಮ 2008ರ ಶೌರ್ಯ ಚಕ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಿದರು.
ತನಕ ಗ್ರಾಮದಲ್ಲಿಯೇ ಮೊದಲ ಸೈನಿಕನಾಗಿ ದೇಶಸೇವೆಗಾಗಿ ಹೊರಟವರೇ ಲೂಯಿಸ್. ಸೈನ್ಯಕ್ಕೆ ಸೇರುತ್ತೇನೆ ಅಂತ ಅಂದುಕೊಂಡಿರದ ಲೂಯಿಸ್ಗೆ ಶೌರ್ಯ ಚಕ್ರ ಪ್ರಶಸ್ತಿ ಬಂದಿದ್ದು ಕಣ್ಣಲ್ಲಿ ಕಂಬನಿ ಮಿಡಿಯುವಂತಾಯಿತು.
ಕಡು ಬಡತನದಲ್ಲಿ ಹುಟ್ಟಿ, ತುತ್ತು ಅನ್ನಕ್ಕಾಗಿ ಕಷ್ಟಪಡುತ್ತಿದ್ದ ಕುಟುಂಬದಿಂದ ಬಂದ ನಾನು ದೇಶದ ಅತಿದೊಡ್ಡ ಪ್ರಶಸ್ತಿಯನ್ನು ಪಡೆಯುತ್ತೇನೆ ಎಂಬುದನ್ನು ನಾನು ನಂಬಲು ಅಸಾಧ್ಯವಾಯಿತು. ಆದರೆ ರಾಷ್ಟ್ರಪತಿ ನನಗೆ ಶೌರ್ಯ ಪ್ರಶಸ್ತಿಯನ್ನು ನೀಡಿದ ವೇಳೆ ನನಗೆ ಆದ ಖುಷಿ ಅಷ್ಟಿಷ್ಟಲ್ಲ ಎನ್ನುತ್ತಾರೆ ಮಾಜಿ ಸೈನಿಕ.
ಇದಾದ ಬಳಿಕ 2009ರಲ್ಲಿ ಭಾರತ ಸೇನೆಯು ಸುಮಾರು ಸಾವಿರದ ಎಂಟುನೂರು ಮಂದಿ ಸೈನಿಕರನ್ನು ಶಾಂತಿ ಸೇನಾ ಕಾರ್ಯಕ್ರಮಕ್ಕಾಗಿ ಇಸ್ರೇಲ್ನ ಲೆಬನನ್ ಪ್ರಾಂತ್ಯಕ್ಕೆ ಕಳುಹಿಸಿಕೊಟ್ಟಿತ್ತು. ಅದರಲ್ಲಿ ಲೂಯಿಸ್ ಕೂಡ ಒಬ್ಬರು ಭಾಗಿಯಾಗಿದ್ದು ಮತ್ತೊಂದು ವಿಶೇಷ. ಶೌರ್ಯ ಚಕ್ರ ಪ್ರಶಸ್ತಿ ಬಂದಾಗ ನಮ್ಮ ತಂದೆ-ತಾಯಿಗಳಿಗೆ ಅದು ಏನು ಎಂಬುದು ಕೂಡ ಗೊತ್ತಿರಲಿಲ್ಲ. ಅಂತಹ ಮುಗ್ಧರು ನನ್ನ ಪೋಷಕರು. ಹಾಗಾಗಿ ನಾನು ಹೇಳಿದ್ದು ನನ್ನ ಚರ್ಚ್ ಫಾದರ್ಗೆ. ಹಾಗಾದರೆ ನಾನು ಯಾರು ಎಂಬುದು ಗೊತ್ತಾಗಿ ನನ್ನನ್ನ ಆಲಂಗಿಸಿ ಬೇಷ್ ಎಂದಿದ್ದರಂತೆ.
ದೇಶಸೇವೆ ಮಾಡಬೇಕು ಅಂತ ಅಂದುಕೊಂಡಿರದ ವ್ಯಕ್ತಿಯೇ ಇವತ್ತು ಶೌರ್ಯ ಚಕ್ರ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ನಿಜಕ್ಕೂ ಅತಿಶಯೋಕ್ತಿ. ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಡತನದ ಮಧ್ಯೆ ಹುಟ್ಟಿ ಕಣ್ಣೆದುರಿಗಿನ ಸೈನಿಕರನ್ನು ನೋಡಿ ದೇಶ ಸೇವೆಯನ್ನು ಮಾಡಲೇಬೇಕೆಂದು ಪಣತೊಟ್ಟವರ ಯಶೋಗಾಥೆ ನಿಜಕ್ಕೂ ಹೆಮ್ಮೆ ಪಡುವಂತಹದ್ದು.
ಶೌರ್ಯ ಚಕ್ರ ಪ್ರಶಸ್ತಿಯನ್ನು ಪಡೆದುಕೊಂಡರು ಎಂದು ನಾವು ಕೇಳಿದ್ದೆವು. ಆದರೆ, ಆ ವ್ಯಕ್ತಿಯೇ ನಮ್ಮ ಕ್ಯಾಂಪಸ್ಗೆ ಬಂದು ಎನ್ಸಿಸಿ ತರಬೇತಿ ನೀಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಇವರನ್ನು ನೋಡಿ ನಮಗೂ ಕೂಡ ಒಮ್ಮೆ ರೋಮಾಂಚನವಾಗುತ್ತದೆ. ಅವರಂತೆಯೇ ನಾವು ಕೂಡ ಏನನ್ನಾದರೂ ಸಾಧಿಸಿ ಹೆಮ್ಮೆಯ ಪುತ್ರರಾಗಬೇಕು ಎಂದೆನಿಸದೆ ಇರದು. ನಮ್ಮಂತಹ ಯುವ ಪೀಳಿಗೆಗೆ ಇವರು ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದು ಎನ್ಸಿಸಿ ವಿದ್ಯಾರ್ಥಿನಿ ನಿಹಾರಿಕಾ ಮಾತಾಗಿದೆ.
ಒಟ್ಟಾರೆ ನಾನು ದೇಶ ಸೇವೆಯನ್ನು ಮಾಡಿದ್ದಷ್ಟೇ ಸಾಲದು ಮುಂದೆ ನಮ್ಮ ಕುಟುಂಬದ ಎಲ್ಲರೂ ಕೂಡ ವಿವಿಧ ಸೈನಿಕ ವೃತ್ತಿಯನ್ನು ಮಾಡುವ ಮೂಲಕ ದೇಶ ಸೇವೆಗೆ ಪ್ರಾಣವನ್ನು ಮುಡಿಪಾಗಿರಬೇಕು ಎಂಬುದು ನನ್ನ ಆಶಯ. ಅದಕ್ಕಾಗಿ ನನ್ನ ಮಕ್ಕಳು ಕೂಡ ದೇಶ ಸೇವೆ ಮಾಡಲು ಉತ್ಸುಕರಾಗಿದ್ದಾರೆ. ಹಾಗಾಗಿ ಅವರನ್ನು ಕೂಡ ದೇಶ ಸೇವೆಗೆ ಖಂಡಿತ ಕಳುಹಿಸಿಕೊಡುತ್ತೇನೆ. ಇವತ್ತು ಭಾರತದ 130 ಕೋಟಿ ಮಂದಿ ಸುಖವಾಗಿ ಜೀವನ ನಡೆಸುತ್ತಿದ್ದಾರೆ ಎಂದರೆ ನಮ್ಮಂತಹ ಯೋಧರಿಂದ ಎಂಬ ಮಾತು ಕೇಳುತ್ತಿದ್ದರೆ ಇಂತಹ ಮಣ್ಣಿನಲ್ಲಿ ಹುಟ್ಟಿದ ನಾವೇ ಧನ್ಯರು ಎನ್ನುತ್ತಾರೆ ಲೂಯಿಸ್ ಪೇರಿಯಾ ನಾಯಗಂ.