ಹಾಸನ: ಜಿಲ್ಲೆಯಲ್ಲಿ ಒಟ್ಟು 7,411 ಮಂದಿ ಮಕ್ಕಳಿಗೆ ಸೋಂಕು ತಗುಲಿತ್ತು. ಅದರಲ್ಲಿ 4 ಮಂದಿ ಮಕ್ಕಳಿಗೆ ಮಿಸ್ಸಿ ಕೋವಿಡ್ ಕಾಣಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 39 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ಅದರಲ್ಲಿ 3 ಮಂದಿ ಇಬ್ಬರು ಪೋಷಕರನ್ನು ಕಳೆದುಕೊಂಡರೆ, ಇನ್ನುಳಿದ 36 ಮಂದಿ ಒಬ್ಬೊಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ. ಅಂತಹ ಕುಟುಂಬಗಳು ಯಾರ್ಯಾರು ಇದ್ದಾರೆ ಅಂತವರ ಮನೆಗೆ ನಾವುಗಳು ಹೋಗಿ ಸಾಂತ್ವನ ಹೇಳುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಭವಿಷ್ಯದ ದೃಷ್ಟಿಯಿಂದ ಮುಖ್ಯಮಂತ್ರಿ ಸೇರಿದಂತೆ ನಮ್ಮ ಸರ್ಕಾರವೂ ಸೋಂಕಿತರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದ್ದೇವೆ. ಇವರೆಲ್ಲರೂ ಮಧ್ಯಮ ಮತ್ತು ಬಡತನದಿಂದ ಬಂದಿರುವ ಕುಟುಂಬ ಎಂಬ ವಿಚಾರ ಗೊತ್ತಾಗಿದೆ.
ಆ ಮಕ್ಕಳನ್ನು ಹತ್ತಿರ ಸಂಬಂಧಿಕರು ನೋಡಿಕೊಳ್ಳುತ್ತಿದ್ದು, ಅವರಿಗೆ ಮುಂದೆ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಸರ್ಕಾರದ ಮೂಲಕವೇ ದತ್ತು ಸ್ವೀಕಾರ ಕೇಂದ್ರಗಳಿವೆ. ಅವರ ಮೂಲಕ ಅವರುಗಳನ್ನು ದತ್ತು ಕೊಡುವಂತಹ ಕಾರ್ಯವನ್ನು ಕಾನೂನಿನಡಿ ಮಾಡಲಾಗುವುದು. ಬಾಲ ಹಿತೈಷಿ ಎಂಬ ಯೋಜನೆಯಲ್ಲಿ ದಾನಿಗಳಿಂದ ಸಹಾಯ ಪಡೆದು ಮಕ್ಕಳ ಮತ್ತು ದಾನಿಗಳ ನಡುವೆ ಸರ್ಕಾರ ಮತ್ತು ನಮ್ಮ ಇಲಾಖೆ ಕೊಂಡಿಯಾಗಿ ಕೆಲಸ ಮಾಡುತ್ತದೆ ಎಂದರು.
ಓದಿ: ಬಿಎಸ್ವೈ ವರ್ಸ್ಟ್ ಚೀಫ್ ಮಿನಿಸ್ಟರ್: ಮತ್ತೆ ಗುಡುಗಿದ ಸಿದ್ದರಾಮಯ್ಯ