ಹಾಸನ: ಪ್ರತಿಯೊಬ್ಬನೂ ಈ ಜಗತ್ತಿನಲ್ಲಿ ಸಂತೃಪ್ತ ಜೀವನವನ್ನು ಸಾಗಿಸಲು ಮತ್ತು ತನ್ನ ಜೀವನವು ಆರ್ಥಿಕ, ದೈಹಿಕ ಮತ್ತು ಆಧ್ಯಾತ್ಮಿಕವಾಗಿ ತೃಪ್ತಿಕರವಾಗಿರಲಿ ಎಂದು ಬಯಸುತ್ತಾನೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಜ. ಮುಹಮ್ಮದ್ ಕುಂಞ ಅಭಿಪ್ರಾಯಪಟ್ಟರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನದ 'ಕನ್ನಡದಲ್ಲಿ ಸಾರ್ವಜನಿಕ ಕುರಾನ್' ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯ ಪ್ರವಚನಗಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯರು ದೇವನ ಸೃಷ್ಟಿಯಾಗಿದ್ದು, ಮಾನವನು ತನ್ನ ಸೃಷ್ಟಿಕರ್ತನನ್ನು ಅರಿತು ಅವನ ಇಚ್ಛೆಗೆ ಅನುಸಾರವಾಗಿ ಜೀವನ ಸಾಗಿಸಿದರೆ ಮಾತ್ರ ಅವನು ಇಹದಲ್ಲಿ ಶಾಂತಿ, ನೆಮ್ಮದಿ, ಸುಭಿಕ್ಷೆ ಮತ್ತು ಕಲ್ಯಾಣವನ್ನು ಹೊಂದುವನು. ಮಾತ್ರವಲ್ಲದೇ ಮರಣಾ ನಂತರ ಸಿಗುವ ಶಾಶ್ವತ ಪರಲೋಕದಲ್ಲೂ ಮೋಕ್ಷ ಮತ್ತು ಯಶಸ್ಸು ಪಡೆಯುವನು ಎಂದು ಜಮಾತ್ ನಂಬಿದೆ ಎಂದರು.
ಜೊತೆಗೆ, ನಮ್ಮಲ್ಲಿ ಪ್ರತಿಯೊಬ್ಬನೂ ಈ ಜಗತ್ತಿನಲ್ಲಿ ಸಂತೃಪ್ತ ಜೀವನವನ್ನು ಸಾಗಿಸಲು ಮತ್ತು ತನ್ನ ಜೀವನವು ಆರ್ಥಿಕ, ದೈಹಿಕ ಮತ್ತು ಆಧ್ಯಾತ್ಮಿಕವಾಗಿ ತೃಪ್ತಿಕರವಾಗಿರಲಿ ಎಂದು ಬಯಸುತ್ತಾನೆ. ಆದರೆ, ಜೀವನದಲ್ಲಿ ಸಂತೋಷವಾಗಿರಲು ತನ್ನ ಕರ್ತವ್ಯವೇನೆಂಬುದನ್ನು ಮಾತ್ರ ಮನುಷ್ಯ ಮರೆತಿದ್ದಾನೆ. ಪ್ರಪಂಚದಲ್ಲಿ ನಾವು ಸುಖ-ಶಾಂತಿಯಿಂದ ಬಾಳಬೇಕಾದರೆ ಇತರರ ಜೀವನ, ಘನತೆ ಮತ್ತು ಹಕ್ಕುಗಳನ್ನು ಗೌರವಿಸಬೇಕಾದುದು ಅತ್ಯವಶ್ಯಕ ಎಂದು ಹೇಳಿದರು.
ಇಂದು ಮನುಷ್ಯನು ತನ್ನ ಕರ್ಮಗಳಿಂದ, ತನ್ನ ನಡವಳಿಕೆಯಿಂದ, ತನ್ನ ರೀತಿ ನೀತಿಗಳಿಂದ ಸ್ವತಃ ತನ್ನನ್ನು ತಾನೇ ಸಂಕಷ್ಟಕ್ಕೆ ಸಿಲುಕಿಸಿಕೊಂಡಿದ್ದಾನೆ. ಅವನು ತನ್ನ ಸ್ವಾರ್ಥಕ್ಕಾಗಿ ಇತರರ ಹಕ್ಕುಗಳನ್ನು ಕಸಿಯುತ್ತಿದ್ದಾನೆ. ತನ್ನ ಸ್ವಂತ ಲಾಭಕ್ಕಾಗಿ ಇತರರ ಜೀವನ ಮತ್ತು ಆಸ್ತಿಗಳಿಗೆ ಹಾನಿಯನ್ನುಂಟು ಮಾಡುತ್ತಿದ್ದಾನೆ. ಈ ರೀತಿ ಪ್ರತಿಯೊಬ್ಬ ವ್ಯಕ್ತಿಯು ಪರಸ್ಪರರ ಜೀವನ ಮತ್ತು ಆಸ್ತಿಯನ್ನು ಕಬಳಿಸುತ್ತಾ ಇತರರ ಮಾನ, ಗೌರವ ಮತ್ತು ಘನತೆಗಳ ಮೇಲೆ ಅಕ್ರಮವೆಸಗುತ್ತಿದ್ದಾನೆ. ಇದರ ಪರಿಣಾಮವಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷ ಮತ್ತು ತೃಪ್ತಿಯಿಂದ ವಂಚಿತರಾಗುತ್ತಿದ್ದಾರೆ. ಜೊತೆಗೆ, ಶಾಂತಿ ಮತ್ತು ನೆಮ್ಮದಿಗಾಗಿ ತಡಕಾಡುತ್ತಿದ್ದಾರೆ ಎಂದು ಜೀವನ ಮಾರ್ಗದ ಬಗ್ಗೆ ತಿಳಿಸಿಕೊಟ್ಟರು.